ಕಾರವಾರ:
ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಹಾಗೂ ದ್ವೇಷದ ಭಾಷಣ ಮಾಡಿದ ಆರೋಪದಲ್ಲಿ ಮಾಜಿ ಕೇಂದ್ರ ಸಚಿವ, ಸಂಸದ ಅನಂತಕುಮಾರ ಹೆಗಡೆ (Anantakumar Hegde) ವಿರುದ್ಧ ಕುಮಟಾ ಠಾಣೆ ಪೊಲೀಸರು (Kumata police station) ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವುದು ವರದಿಯಾಗಿದೆ.
ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುವ ಹೇಳಿಕೆ ನೀಡಿರುವುದರ ಜತೆಗೆ ಸಾಮಾಜಿಕ ಅಶಾಂತಿಗೆ ಕಾರಣವಾಗುವ ಮಾತುಗಳನ್ನಾಡಿರುವ ಹಿನ್ನೆಲೆಯಲ್ಲಿ ಅನಂತಕುಮಾರ ಹೆಗಡೆ ವಿರುದ್ಧ ಸೆಕ್ಷನ್ 153ಎ, 505 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಶನಿವಾರ ಕುಮಟಾದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಂಸದ ಅನಂತಕುಮಾರ ಪ್ರಚೋದಕನಾರಿ ಭಾಷಣ ಮಾಡಿದ್ದರು. ಬಾಬರಿ ಮಸೀದಿಯಂತೆ ದೇವಸ್ಥಾನಗಳ ಕುರುಹು ಇರುವ ಭಟ್ಕಳ, ಶಿರಸಿ ಹಾಗೂ ಇತರ ಮಸೀದಿಗಳನ್ನು ಒಡೆಯುವುದಾಗಿ ಹೆಗಡೆ ಹೇಳಿಕೆ ನೀಡಿದ್ದರು. ಇದೇ ಸಂದರ್ಭ ಅನಂತ ಕುಮಾರ ಹೆಗಡೆ ಅವರು ಸಿದ್ದರಾಮಯ್ಯರ ವಿರುದ್ಧವೂ ಏಕವಚನದಲ್ಲಿ ಮಾತನಾಡಿದ್ದರು. ಇದರ ವಿರುದ್ಧ ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.