ಹುಬ್ಬಳ್ಳಿ, ನ. 6: “ಶಿಗ್ಗಾವಿ ಕ್ಷೇತ್ರವನ್ನು ಕಾರ್ಯಕರ್ತರಿಗೆ ಬಿಟ್ಟುಕೊಡುತ್ತೇವೆ ಎಂದು ಹೇಳಿದ್ದರಂತೆ, ಕೊಟ್ಟ ಮಾತಿನಂತೆ ಬಿಜೆಪಿಯವರು ನಡೆದು ಕೊಳ್ಳಲಿಲ್ಲವಂತೆ. ಹೀಗಾಗಿ ಮತದಾರರು ಸಹ ಬಿಜೆಪಿ ಮೇಲೆ ಆಕ್ರೋಶಗೊಂಡಿದ್ದು, ಕಾಂಗ್ರೆಸ್ ಶಿಗ್ಗಾವಿಯಲ್ಲಿ ಗೆಲ್ಲುವುದು ಖಚಿತ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶಿಗ್ಗಾವಿ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.
ಶಿಗ್ಗಾವಿ ಉಪಚುನಾವಣೆ ಬಗ್ಗೆ ಕೇಳಿದಾಗ, “ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಮತಕ್ಕಿಂತ ಹೆಚ್ಚಿನ ಮತಗಳಿಂದ ಈ ಉಪಚುನಾವಣೆಯನ್ನು ನಾವು ಗೆಲ್ಲುತ್ತೇವೆ” ಎಂದು ಹೇಳಿದರು.
ಚುನಾವಣೆ ಹೊತ್ತಿನಲ್ಲಿ ಆರೋಪಗಳು ಸಾಮಾನ್ಯ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತನ ಹೆಸರನ್ನು ಬರೆದಿಟ್ಟು ಎಸ್ ಡಿಎ ಆತ್ಮಹತ್ಯೆ ಪ್ರಕರಣದಿಂದ ಹಾಗೂ ಇತರೇ ಭ್ರಷ್ಟಾಚಾರ ಆರೋಪಗಳಿಂದ ಸರ್ಕಾರಕ್ಕೆ ಮುಜುಗರವಾಗುತ್ತಿಲ್ಲವೇ ಎಂದು ಕೇಳಿದಾಗ, “ಚುನಾವಣೆ ಹೊತ್ತಿನಲ್ಲಿ ಇಂತಹ ಆರೋಪಗಳು ಸಾಮಾನ್ಯ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಸಚಿವರ ಆಪ್ತರಾಗಲಿ, ನೀವಾಗಲಿ, ನಾನಾಗಲಿ, ರಸ್ತೆಯಲ್ಲಿ ಹೋಗುವ ಯಾರಾದರಾಗಲಿ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು.
ನೀವು ನ್ಯಾಯಾಧೀಶರೇ? ತನಿಖಾಧಿಕಾರಿಗಳೇ?
ಲೋಕಾಯುಕ್ತದವರು ಕೇವಲ 2 ಗಂಟೆಗಳ ಕಾಲ ಮುಖ್ಯಮಂತ್ರಿಗಳನ್ನು ವಿಚಾರ ನಡೆಸಿದರು ಎನ್ನುವ ವಿಚಾರದ ಬಗ್ಗೆ ಕೇಳಿದಾಗ, ” ನೀವು (ಮಾಧ್ಯಮದವರು) ನ್ಯಾಯಾಧೀಶರೇ? ತನಿಖಾಧಿಕಾರಿಗಳೇ? ವಿಚಾರಣೆ ವೇಳೆ ಯಾವ ಪ್ರಶ್ನೆಯನ್ನು ಕೇಳಿದರು ಎಂಬುದು ವಿಚಾರಣೆಗೆ ಒಳಪಟ್ಟವರಿಗೆ ಗೊತ್ತಿರುತ್ತದೆ. ಇದರ ಬಗ್ಗೆ ನೂರಾರು ಜನ ನೂರಾರು ರೀತಿ ಮಾತನಾಡುತ್ತಾರೆ. ಮತ್ತೆ ತನಿಖೆಗೆ ಕರೆಯಬಹುದಲ್ಲವೇ? ಇದರ ಬಗ್ಗೆ ನಿಮಗೆ ಏನು ಗೊತ್ತು?” ಎಂದರು.
ಮುಖ್ಯಮಂತ್ರಿಗಳ ಬಗ್ಗೆ ಸಂತೋಷ ಪಡಬೇಕು
“ಮುಖ್ಯಮಂತ್ರಿಗಳು ಲೋಕಾಯುಕ್ತಕ್ಕೆ ಗೌರವ ಕೊಟ್ಟು, ಅಧಿಕಾರಿಗಳು ಕರೆದರು ಎಂದು ಅವರ ಕಚೇರಿಗೆ ಹೋಗಿ ಉತ್ತರ ಕೊಟ್ಟು ಬಂದಿದ್ದಾರೆ. ಕಾನೂನಿಗೆ ಗೌರವ ಕೊಡುವ ಮುಖ್ಯಮಂತ್ರಿ ರಾಜ್ಯದಲ್ಲಿ ಇದ್ದಾರೆ ಎಂದು ನೀವೆಲ್ಲರೂ ಸಂತೋಷ ಪಡಬೇಕು” ಎಂದು ಹೇಳಿದರು.
ಬಿಜೆಪಿಯವರಿಗೆ ಯಾರ ಮೇಲೆ ನಂಬಿಕೆಯಿದೆ?
ಲೋಕಾಯುಕ್ತದವರು ಮತ್ತು ಮುಖ್ಯಮಂತ್ರಿಗಳು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎನ್ನುವ ಆರ್. ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಲೋಕಾಯುಕ್ತವನ್ನು ಯಾರ ಕಾಲದಲ್ಲಿ ನೇಮಕ ಮಾಡಲಾಗಿದೆ ಎಂಬುದು ತಿಳಿದಿದೆಯೇ? ಬಿಜೆಪಿ ಕಾಲದಲ್ಲಿ ನೇಮಕವಾದ ಅವರ ಬಗ್ಗೆ ಅವರಿಗೇ ನಂಬಿಕೆ ಇಲ್ಲ ಅಂದರೆ, ಇನ್ನು ಯಾರ ಮೇಲೆ ನಂಬಿಕೆ ಇದೆ ಅವರಿಗೆ” ಎಂದರು.
ಆರ್ ಅಶೋಕ್ ಮಾತು ಖಂಡನೀಯ; ಕ್ರಮ ತೆಗೆದುಕೊಳ್ಳಲು ಲೋಕಾಯುಕ್ತಕ್ಕೆ ಆಗ್ರಹ
“ಆರ್. ಅಶೋಕ್ ಅವರು ಮ್ಯಾಚ್ ಫಿಕ್ಸಿಂಗ್ ಎನ್ನುವ ಪದ ಬಳಸಿರುವುದು ನ್ಯಾಯಾಂಗ ಮತ್ತು ನ್ಯಾಯಪೀಠಕ್ಕೆ ಮಾಡಿರುವ ಅಪಮಾನ. ಇದು ಸಾಂವಿಧಾನಿಕ ಹುದ್ದೆಗಳಾದ ಲೋಕಾಯುಕ್ತ ಮತ್ತು ಅಧಿಕಾರಿಗಳ ಸ್ಥಾನಕ್ಕೆ ದೊಡ್ಡ ಅಗೌರವ. ಇವು ರಾಜಕೀಯದವರು ನೇಮಕ ಮಾಡುವ ಹುದ್ದೆಗಳಲ್ಲ, ಸಾಂವಿಧಾನಿಕ ಹುದ್ದೆಗಳು ಎಂದರು.
ಅಶೋಕ್ ಅವರು ನ್ಯಾಯಾಲಯಗಳ ವಿರುದ್ಧ ಹೀಗೆ ಮಾತನಾಡಬಾರದು. ಅಶೋಕ ಅವರು, ತಾವೇ ಸಾಂವಿಧಾನಿಕ ಸ್ಥಾನದಲ್ಲಿ ಕುಳಿತು, ಮತ್ತೊಂದು ಸಾಂವಿಧಾನಿಕ ಹುದ್ದೆಯ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಆರ್. ಅಶೋಕ್ ಅವರ ಮೇಲೆ ಲೋಕಾಯುಕ್ತವು ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.