Home ರಾಜಕೀಯ Janardhana Reddy| ಯಾವುದೇ ಕಾರಣಕ್ಕೂ ಬಿಜೆಪಿ ಅಥವಾ ಇತರೆ ಪಕ್ಷದ ಜೊತೆ ನಾವು ಹೋಗುವುದಿಲ್ಲ: ಜನಾರ್ದನ್...

Janardhana Reddy| ಯಾವುದೇ ಕಾರಣಕ್ಕೂ ಬಿಜೆಪಿ ಅಥವಾ ಇತರೆ ಪಕ್ಷದ ಜೊತೆ ನಾವು ಹೋಗುವುದಿಲ್ಲ: ಜನಾರ್ದನ್ ರೆಡ್ಡಿ

57
0
We will not go with BJP or any other party for any reason: Janardhan Reddy
We will not go with BJP or any other party for any reason: Janardhan Reddy

ಬೆಂಗಳೂರು:

ಯಾವುದೇ ಕಾರಣಕ್ಕೂ ಬಿಜೆಪಿ ಅಥವಾ ಇತರೆ ಪಕ್ಷದ ಜೊತೆ ನಾವು ಹೋಗುವುದಿಲ್ಲ. ಎಲ್ಲ ಚುನಾವಣೆಗಳಲ್ಲೂ ಸ್ವತಂತ್ರವಾಗಿ ನಾವು ಸ್ಪರ್ಧೆ ಮಾಡುತ್ತೇವೆ ಎಂದು ಕೆಆರ್‌ ಪಿಪಿ ಪಕ್ಷದ ಅಧ್ಯಕ್ಷ, ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಶನಿವಾರ ಖಾಸಗಿ ಹೋಟೆಲ್‍ನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ನಾವು ಸ್ಪರ್ಧೆ ಮಾಡಲ್ಲ. ಬಳ್ಳಾರಿ, ಬೀದರ್, ಕಲಬುರ್ಗಿ, ಕೊಪ್ಪಳ, ರಾಯಚೂರು ಹಾಗೂ ಕೋಲಾರ ಜಿಲ್ಲೆಗಳಲ್ಲಿ ನಾನು ಕೆಲಸ ಮಾಡುತ್ತೇನೆ. ಫೆಬ್ರವರಿಯಲ್ಲಿ ನಾವು ಎಷ್ಟು ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇವೆಂದು ಪ್ರಕಟಿಸುತ್ತೇವೆ ಎಂದರು.

ಬಳ್ಳಾರಿ ನಾನು ಹುಟ್ಟಿ ಬೆಳೆದ ಜಿಲ್ಲೆ. ಕೋಲಾರದಲ್ಲೂ ನನ್ನ ಮೇಲೆ ಜನರಿಗೆ ಪ್ರೀತಿ ಇದೆ ಎಂದ ಅವರು, 2028ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. 100 ರಿಂದ 113 ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಸಾಧನೆ ಮಾಡಿವೆ. ಕರ್ನಾಟಕದಲ್ಲಿ ಈವರೆಗೆ ಪ್ರಾದೇಶಿಕ ಪಕ್ಷ ಸಾಧನೆ ಮಾಡಿಲ್ಲ ಎಂಬುದನ್ನು ನಾನು ಸುಳ್ಳು ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಾದೇಶಿಕ ಪಕ್ಷಗಳು ಆರಂಭವಾಗುವುದೇ ಒಂದು, ಎರಡು ಸ್ಥಾನಗಳಿಂದ. ಬಿಜೆಪಿ ಕೂಡಾ ಎರಡು ಸ್ಥಾನ ಗಳಿಸುವ ಮೂಲಕ ಆರಂಭವಾಗಿದ್ದು, ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಒಂದು ಸ್ಥಾನದಿಂದ ಆರಂಭವಾಗಿದೆ. ಈ ಒಂದು ಸ್ಥಾನದಿಂದಲೇ ಪ್ರತಿ ಬೂತ್ ಮಟ್ಟದಲ್ಲಿ ಹಾಗೂ ಮನೆ ಮನೆಗಳನ್ನು ನಾವು ತಲುಪುತ್ತೇವೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ಮಾಜಿ ಅಧ್ಯಕ್ಷ ಜೆ.ರಾಮಣ್ಣ ಸೇರಿದಂತೆ ಪ್ರಮುಖರಿದ್ದರು.

LEAVE A REPLY

Please enter your comment!
Please enter your name here