ಬೆಂಗಳೂರು:
ವಿಜಯೇಂದ್ರ ಯಡಿಯೂರಪ್ಪ ಅವರ ಜೊತೆ ಸೇರಿ ಜನರ ಸಮಸ್ಯೆ ನಿವಾರಣೆಗೆ ಮತ್ತು ಪಕ್ಷ ಸಂಘಟನೆಗೆ ಜೋಡೆತ್ತಿನಂತೆ ದುಡಿಯುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಸಚಿವ ಆರ್.ಅಶೋಕ್ ಅವರು ಪ್ರಕಟಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರಂತೆ ನಮಗೆ ಅಧಿಕಾರದ ಆಸೆ ಇಲ್ಲ. ಕಾಂಗ್ರೆಸ್ ದುರಾಡಳಿತ, ಮೋಸದ ಯೋಜನೆಗಳ ಕುರಿತು ತಿಳಿಸಿ ಜನಜಾಗೃತಿ ಮೂಡಿಸುತ್ತೇವೆ ಎಂದು ತಿಳಿಸಿದರು.
ಜಮೀರ್ ಅವರು ಕರ್ನಾಟಕದಲ್ಲಿ ಕೋಮುವಾದ ಬಿತ್ತುತ್ತಿದ್ದಾರೆ ಎಂದು ಟೀಕಿಸಿದ ಅವರು, ಹತ್ತಾರು ತಪ್ಪುಗಳನ್ನು ಕಾಂಗ್ರೆಸ್ ಸರಕಾರ ಮಾಡಿದೆ. ಬೆಳಗಾವಿ ಅಧಿವೇಶನದಲ್ಲಿ ನಾವು ಇವುಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ಈ ಸಾರಿ ಇನ್ನೂ ಹೆಚ್ಚು ಹೋರಾಟ ಮಾಡಲಿದ್ದೇವೆ ಎಂದರು.
ಮಂಗಳೂರು- ಉಡುಪಿಯಲ್ಲಿ ಹಿಂದೂ ಕಾರ್ಯಕರ್ತರ ಗಡೀಪಾರು ಮಾಡಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ 30-40 ಹಿಂದೂ ಕಾರ್ಯಕರ್ತರ ಕೊಲೆ ಆಗಿತ್ತು. ಟಿಪ್ಪುವಿನ ವೈಭವೀಕರಣ ನಡೆದಿತ್ತು. ಕಾಂಗ್ರೆಸ್ಸಿನ ಮತಾಂಧನಾದ ಟಿಪ್ಪು ಸಂಸ್ಕøತಿಯನ್ನು ಪಕ್ಷ ಜನರಿಗೆ ತಿಳಿಸಲಿದೆ ಎಂದು ತಿಳಿಸಿದರು.
ಸಂಕಷ್ಟದಲ್ಲಿರುವ ರೈತರಿಗೆ ಅವರ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ಈಗಿನ ಸರಕಾರ ನಯಾಪೈಸೆ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ಈ ಸರಕಾರದ ಕಿವಿ ಹಿಂಡುವ ಕಾರ್ಯ ಮಾಡುವುದಾಗಿ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರ ನೇಮಕಾತಿಯಿಂದ ಕಾಂಗ್ರೆಸ್ಸಿಗರಿಗೆ ನಡುಕ ಉಂಟಾಗಿದೆ. ಇನ್ನು ಮುಂದೆ ಕಾಂಗ್ರೆಸ್ ಆಟ ನಡೆಯುವುದಿಲ್ಲ ಎಂಬ ಮಾತು ಕೇಳಿಬರಲಾರಂಭಿಸಿದೆ. ಜನರ ಸಮಸ್ಯೆ ಪರಿಹಾರಕ್ಕಾಗಿ ಹೋರಾಟ ಮಾಡಲು ಮತ್ತು ಸರಕಾರದ ಕಿವಿ ಹಿಂಡುವ ಅವಕಾಶವನ್ನು ವಿಪಕ್ಷ ನಾಯಕನಾಗಿ ನನ್ನನ್ನು ಆಯ್ಕೆ ಮಾಡುವ ಮೂಲಕ ಪಕ್ಷ ನೀಡಿದೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ಇಂದು ಬಿಜೆಪಿ ರಾಜ್ಯ ಕಾರ್ಯಾಲಯದ ಜಗನ್ನಾಥ ಭವನಕ್ಕೆ ತೆರಳಿ, ಬಿಜೆಪಿ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರೊಂದಿಗೆ ಭಾರತಮಾತೆಗೆ ಪುಷ್ಪ ನಮನ ಸಲ್ಲಿಸಲಾಯಿತು.
— R. Ashoka (ಆರ್. ಅಶೋಕ) (@RAshokaBJP) November 18, 2023
ಈ ಸಂದರ್ಭದಲ್ಲಿ ಪಕ್ಷದ ಶಾಸಕರು, ಸಂಸದರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.@BYVijayendra pic.twitter.com/4JAu23AN5o
ರಾಜ್ಯದಲ್ಲಿ ಬಿಜೆಪಿ ಹೊಸದಾಗಿ ಯುವ ನಾಯಕತ್ವಕ್ಕೆ ಅವಕಾಶ ಕೊಟ್ಟಿದ್ದು, ಕಾರ್ಯಕರ್ತರಲ್ಲಿ ಹುರುಪು ತುಂಬಿದೆ. ಮತ್ತೆ ಬಿಜೆಪಿಯನ್ನು ಕರ್ನಾಟಕದಲ್ಲಿ ಸಮರ್ಥವಾಗಿ ಕಟ್ಟುವ ದೃಷ್ಟಿಯಿಂದ ಕೇಂದ್ರದ ನಾಯಕರು, ಲೋಕಸಭಾ ಸದಸ್ಯರು, ಶಾಸಕರು, ಕಾರ್ಯಕರ್ತರು ತೀರ್ಮಾನ ಮಾಡಿ ವಿಜಯೇಂದ್ರರನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ರಾಜ್ಯದಲ್ಲಿ ಸಂಚಲನ ಉಂಟಾಗಿದೆ ಎಂದು ವಿಶ್ಲೇಷಿಸಿದರು.
ಉಳಿದ ಶಾಸಕರ ಜೊತೆ ಒಗ್ಗಟ್ಟಾಗಿ ಮುಂದಿನ ಅಧಿವೇಶನದಲ್ಲಿ ಕೆಲಸ ಮಾಡಲಿದ್ದೇನೆ. ಬೆಳಿಗ್ಗೆ ನಾನು ಬಸವರಾಜ ಬೊಮ್ಮಾಯಿ, ಡಾ. ಅಶ್ವತ್ಥನಾರಾಯಣ್ ಅವರನ್ನು ಭೇಟಿ ಮಾಡಿದ್ದೇನೆ. ಎಲ್ಲರೂ ಒಂದಾಗಿ ಸತ್ತು ಹೋದ ಆಡಳಿತಕ್ಕೆ ಚುರುಕು ಮುಟ್ಟಿಸಲಿದ್ದೇವೆ ಎಂದು ಎಚ್ಚರಿಸಿದರು.
ಯಾರು ಆಡಳಿತ ನಡೆಸುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ. ಉಪ ಮುಖ್ಯಮಂತ್ರಿ ನಾನೇ ಶ್ಯಾಡೊ ಸಿಎಂ ಎಂದು ಎಲ್ಲ ಕಾರ್ಯಕ್ಕೆ ಅವರೇ ಮುಂದೆ ಹೋಗುತ್ತಿದ್ದಾರೆ. ಆಂತರಿಕ ಕಲಹ ನಡೆಯುತ್ತಿದೆ. ಮೊನ್ನೆ ದಾಳಿ ಆದಾಗ 100 ಕೋಟಿಗೂ ಹೆಚ್ಚು ಹಣ ಸಿಕ್ಕಿದೆ. ಕೇಳಿದರೆ ನಂದಲ್ಲ, ನಂದಲ್ಲ ಎನ್ನುತ್ತಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದ್ದು ಎಟಿಎಂ ಸರಕಾರ ಎಂದು ಜನರಿಗೂ ಅರ್ಥ ಆಗಿದೆ. ದಿನವೂ ಟ್ರಾನ್ಸ್‍ಫರ್ ದಂಧೆ ನಡೆಯುತ್ತಿದೆ. ಕಾಂಗ್ರೆಸ್‍ನದು ನೈಜ ಶೇ 40 ಕಮಿಷನ್ ಸರಕಾರ ಎಂದು ಆರೋಪಿಸಿದರು.
ಕಾವೇರಿ ವಿಷಯದಲ್ಲಿ ಹೇಳದೆ ಕೇಳದೆ ತಮಿಳುನಾಡಿಗೆ ನೀರು ಬಿಟ್ಟರು. ಮಾತೆತ್ತಿದರೆ ಕೇಂದ್ರ ಸರಕಾರ ಎನ್ನುತ್ತಾರೆ. ಸಿದ್ದರಾಮಯ್ಯನವರೇ ನಿಮ್ಮ ಸರಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕಾವೇರಿ ವಿಷಯದಲ್ಲಿ ಮೋಸ, ಅಭಿವೃದ್ಧಿಶೂನ್ಯ ಸರಕಾರ ಇಲ್ಲಿದೆ ಎಂದು ತಿಳಿಸಿದರು.