ಬೆಂಗಳೂರು: ವೆಬ್ ಕಾಸ್ಟಿಂಗ್ ಮತ್ತು ಮುಖ ಚಹರೆ ಪತ್ತೆ ತಂತ್ರಜ್ಞಾನ ಬಳಸಿಕೊಂಡು ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸುತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಚೇರಿಗೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ನಿಯೋಗ ಬುಧವಾರ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆಯನ್ನು ಅಧ್ಯಯನ ಮಾಡಿತು.
ಭಾರತ ಸರ್ಕಾರದ ಉಪ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳಾದ ರಮಣ್ ಕುಮಾರ್ ಮತ್ತು ಕೆ. ಮನೋಜ್ ಅವರ ನೇತೃತ್ವದ ನಿಯೋಗದೊಂದಿಗೆ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಿಇಒ ಡಾ. ಆಕಾಶ್ ಕೂಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಪ್ರಾತ್ಯಕ್ಷಿಕೆ ಮೂಲಕ ಕೆಇಎ ಬಳಸುತ್ತಿರುವ ಆಧುನಿಕ ತಂತ್ರಜ್ಞಾನಗಳ ಬಗ್ಗೆ ವಿವರಿಸಿದರು. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕೈಗೊಳ್ಳಲಾಗಿರುವ ಕ್ರಮಗಳನ್ನು ಅವರು ನಿಯೋಗಕ್ಕೆ ವಿವರಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ, ಅಭ್ಯರ್ಥಿಗಳು ಕೇಂದ್ರಕ್ಕೆ ಬಂದ ನಂತರ ನಡೆಯುವ ಪರಿಶೀಲನೆ, ಮುಖ ಚಹರೆ ಪತ್ತೆ ಮೂಲಕ ಅಭ್ಯರ್ಥಿಯ ನೈಜತೆ ದೃಢೀಕರಣ, ಹಾಜರಾತಿ ದಾಖಲಾತಿ, ಪರೀಕ್ಷೆ ಮುಗಿದ ತಕ್ಷಣ ಉತ್ತರಪತ್ರಿಕೆಗಳ ಸ್ಕ್ಯಾನಿಂಗ್ ಮತ್ತು ಫಲಿತಾಂಶ ಪ್ರಕಟಣೆ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಲಾಯಿತು.
ಕೇಂದ್ರ ಸರ್ಕಾರದ ನಿಯೋಗವು ವಿವಿಧ ರಾಜ್ಯಗಳ ಪರೀಕ್ಷಾ ವ್ಯವಸ್ಥೆಯನ್ನು ಅಧ್ಯಯನ ಮಾಡುತ್ತಿದ್ದು, ಉತ್ತಮ ಕಾರ್ಯ ವಿಧಾನಗಳನ್ನು ರಾಷ್ಟ್ರೀಯ ಮಟ್ಟದ ನೀತಿ ರೂಪಿಸುವ ವೇಳೆ ಅಳವಡಿಸಿಕೊಳ್ಳುವ ಉದ್ದೇಶದಿಂದ ಈ ಭೇಟಿ ನೀಡಲಾಗಿದೆ ಎಂದು ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.
ಕೆಇಎ ಅಳವಡಿಸಿಕೊಂಡಿರುವ ಆಧುನಿಕ ಪರೀಕ್ಷಾ ವಿಧಾನಗಳು ಮತ್ತು ಪಾರದರ್ಶಕ ವ್ಯವಸ್ಥೆ ಬಗ್ಗೆ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು.
