Home ರಾಜಕೀಯ ಕೆಪಿಸಿಸಿ ಕಚೇರಿಗೂ ಲೋಕಾಯುಕ್ತ ಎಸ್ ಐಟಿ ಎಡಿಜಿಪಿ ಚಂದ್ರಶೇಖರ್ ಅವರಿಗೂ ಏನು ಸಂಬಂಧ: ಡಿಸಿಎಂ ಡಿ....

ಕೆಪಿಸಿಸಿ ಕಚೇರಿಗೂ ಲೋಕಾಯುಕ್ತ ಎಸ್ ಐಟಿ ಎಡಿಜಿಪಿ ಚಂದ್ರಶೇಖರ್ ಅವರಿಗೂ ಏನು ಸಂಬಂಧ: ಡಿಸಿಎಂ ಡಿ. ಕೆ. ಶಿವಕುಮಾರ್ ಪ್ರಶ್ನೆ

18
0

ಬೆಂಗಳೂರು, ಸೆ. 29: “ಕುಮಾರಸ್ವಾಮಿ ಅವರು ಏನು ಮಾತನಾಡುತ್ತಾರೆ ಎಂಬುದು ಅವರಿಗೇ ಗೊತ್ತಿರುವುದಿಲ್ಲ. ಕೆಪಿಸಿಸಿ ಕಚೇರಿಗೂ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರಿಗೂ ಏನು ಸಂಬಂಧ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಪ್ರಶ್ನಿಸಿದರು.

ಲೋಕಾಯುಕ್ತ ಎಸ್ ಐಟಿ ಎಡಿಜಿಪಿ ಚಂದ್ರಶೇಖರ್ ಅವರ ಬಗ್ಗೆ ತಮಗೆ ತಿಳಿದಿದೆ, ಕೆಪಿಸಿಸಿ ಕಚೇರಿಯಿಂದಲೇ ಪತ್ರ ಬಹಿರಂಗವಾಗಿದೆ ಎಂದು ಕುಮಾರಸ್ವಾಮಿ ಅವರು ಮಾಡಿರುವ ಆರೋಪದ ಬಗ್ಗೆ ಮಾಧ್ಯಮಗಳು ನೆಲಮಂಗಲದಲ್ಲಿ ಭಾನುವಾರ ಗಮನ ಸೆಳೆದಾಗ ಶಿವಕುಮಾರ್ ಅವರು ಹೀಗೆ ಪ್ರತಿಕ್ರಿಯಿಸಿದರು.

“ನಾನು ನಿನ್ನೆ ಊರಿನಲ್ಲೇ ಇರಲಿಲ್ಲ. ಸಾತನೂರು, ಕನಕಪುರದಲ್ಲಿ ಕ್ಷೇತ್ರದ ಕೆಲಸ ಕಸಂಬಂಧ ಪ್ರವಾಸ ಕೈಗೊಂಡಿದ್ದೆ. ಕುಮಾರಸ್ವಾಮಿ ಅವರು ಕೆಪಿಸಿಸಿ ನೆನೆಸಿಕೊಂಡರೆ ನಾನು ಏನು ತಾನೇ ಮಾತನಾಡಲು ಸಾಧ್ಯ” ಎಂದು ಮರುಪ್ರಶ್ನಿಸಿದರು.

ಕುಮಾರಸ್ವಾಮಿ ತಮ್ಮ ಬಳಿ 7 ಸಚಿವರ ಅಕ್ರಮಗಳ ಬಗ್ಗೆ ದಾಖಲೆಗಳಿವೆ ಎಂದು ಹೇಳುತ್ತಿದ್ದಾರೆ ಎಂದು ಕೇಳಿದಾಗ, “ಅವರ ಬಳಿ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ. ಚಂದ್ರಶೇಖರ್ ಅವರನ್ನು ನಾನು ನೋಡಿಯೂ ಇಲ್ಲ, ಮಾತನಾಡಿಯೂ ಇಲ್ಲ, ನನಗೆ ಅವರು ಸಿಕ್ಕಿಲ್ಲ, ನನಗೆ ಅವರು ಗೊತ್ತೇ ಇಲ್ಲ” ಎಂದರು.

ಎಲ್ಲ ಯಶಸ್ಸು ಶ್ರೀನಿವಾಸ್ ಗೆ ಸಲ್ಲಬೇಕು

ಸೋಲೂರನ್ನು ಮಾಗಡಿಯಿಂದ ಬೇರ್ಪಡಿಸಿ ನೆಲಮಂಗಲ ತಾಲೂಕಿಗೆ ಸೇರಿಸಲು ತಾವು ಪ್ರಯತ್ನ ಪಡುತ್ತಿರುವುದಾಗಿ ಸಂಸದ ಸುಧಾಕರ್ ಹೇಳಿಕೊಳ್ಳುತ್ತಿರುವ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಅವರು ಸೋಲೂರನ್ನು ನೆಲಮಂಗಲಕ್ಕೆ ಸೇರಿಸುವಂತೆ ಒಂದು ವರ್ಷದಿಂದ ನನ್ನ ಮತ್ತು ಸಿಎಂ ಸಿದ್ದರಾಮಯ್ಯರವರ ಬೆನ್ನು ಬಿದ್ದಿದ್ದಾರೆ. ಅದರ ಸಂಪೂರ್ಣ ಪ್ರಯತ್ನ, ಶ್ರೇಯಸ್ಸು ಶ್ರೀನಿವಾಸ್ ಅವರಿಗೆ ಸಲ್ಲಬೇಕು. ಸುಧಾಕರ್ ಅವರು ತಮ್ಮ ಹೆಸರೂ ಇದರ ಜತೆ ಇರಲಿ ಎಂದು ಏನೇನೋ ಹೇಳಿಕೊಳ್ಳುತ್ತಿದ್ದಾರೆ. ಇಲ್ಲಿ ಏನೇ ಅಭಿವೃದ್ಧಿ ಕೆಲಸವಾದರೂ ಅದರ ಎಲ್ಲಾ ಯಶಸ್ಸು ಶ್ರೀನಿವಾಸ್ ಅವರಿಗೇ ಸಲ್ಲಬೇಕು” ಎಂದರು.

LEAVE A REPLY

Please enter your comment!
Please enter your name here