ಬೆಂಗಳೂರು: ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೀರಿನ ಸಂಪ್ ಕ್ಲೀನ್ ಮಾಡುವ ವೇಳೆ ಮೂವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಮೃತಪಟ್ಟವರನ್ನು ಮುನಿಶಾಮಪ್ಪ, ರುದ್ರಕುಮಾರ್ (ಪ್ಲಂಬರ್) ಹಾಗೂ ವಿಶ್ವನಾಥ ಆಚಾರಿ (22), ಡೆಲಿವರಿ ಬಾಯ್ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 12 ವರ್ಷಗಳ ಹಿಂದೆ ನಿರ್ಮಿಸಲಾದ ಸಂಪ್ ಅನ್ನು ದೀರ್ಘಕಾಲದಿಂದ ಬಳಕೆ ಮಾಡಲಾಗಿರಲಿಲ್ಲ. ಅದರೊಳಗೆ ಕಸ ಮತ್ತು ನೀರು ಕೊಳೆತು ದುರ್ವಾಸನೆ ಉಂಟಾಗಿದ್ದ ಸಾಧ್ಯತೆ ಇದೆ. ಬೇಸಿಗೆ ಹಿನ್ನೆಲೆ ಸ್ವಚ್ಛಗೊಳಿಸಲು ಮುನಿಶಾಮಪ್ಪ ಸಂಪ್ ಒಳಗೆ ಇಳಿದಿದ್ದಾರೆ ಎನ್ನಲಾಗಿದೆ.
ಸಂಪ್ ಒಳಗೆ ಸ್ವಚ್ಛತೆಗೆ ಕೆಲವು ಕೆಮಿಕಲ್ ಹಾಕಿದ ಬಳಿಕ ವಿಷವಾಯು ಉತ್ಪತ್ತಿಯಾಗಿ ಅವರು ಅಸ್ವಸ್ಥಗೊಂಡು ಒಳಗೇ ಕುಸಿದುಬಿದ್ದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅವರನ್ನು ರಕ್ಷಿಸಲು ಪ್ಲಂಬರ್ ರುದ್ರಕುಮಾರ್ ಒಳಗೆ ಇಳಿದರೂ ಅವರು ಸಹ ಪ್ರಜ್ಞೆ ಕಳೆದುಕೊಂಡು ಮೃತಪಟ್ಟಿದ್ದಾರೆ.
ಇವರಿಬ್ಬರನ್ನೂ ರಕ್ಷಿಸಲು ಎದುರು ಮನೆಯಿಂದ ಬಂದಿದ್ದ 22 ವರ್ಷದ ವಿಶ್ವನಾಥ ಆಚಾರಿ ಕೂಡ ಸಂಪ್ ಒಳಗೆ ಇಳಿದಿದ್ದು, ವಿಷವಾಯುವಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ವೈಟ್ಫೀಲ್ಡ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ದುರ್ಘಟನೆ, ತರಬೇತಿ ಪಡೆದ ತಜ್ಞರು ಹಾಗೂ ಸುರಕ್ಷತಾ ಉಪಕರಣಗಳಿಲ್ಲದೆ ಸಂಪ್ಗಳು ಮತ್ತು ಮುಚ್ಚಿದ ಸ್ಥಳಗಳನ್ನು ಸ್ವಚ್ಛಗೊಳಿಸುವ ಅಪಾಯವನ್ನು ಮತ್ತೊಮ್ಮೆ ನೆನಪಿಸಿದೆ. ತನಿಖೆ ಮುಂದುವರಿದಿದೆ.
