
ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಆಪರೇಷನ್ ಬಿಪಿಎಲ್ ಕಾರ್ಡ್ ಅಭಿಯಾನದಲ್ಲಿ ಸುಮಾರು 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳು ಪತ್ತೆಯಾಗಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಮುನಿಯಪ್ಪರು ನೇರವಾಗಿ ಬಿಪಿಎಲ್ ದುರುಪಯೋಗ ಮಾಡುತ್ತಿರುವವರನ್ನೇ ಪ್ರಶ್ನಿಸಿ,
“ಸ್ವಂತ ಮನೆ ಕಟ್ಟಿದವರು, ವಾಹನ ಹೊಂದಿರುವವರು, ವ್ಯವಹಾರ ನಡೆಸಿ ತೆರಿಗೆ ಕಟ್ಟುವವರು – ಇವರೆಲ್ಲ ಬಡವರೇನಾ? ಇಂಥವರು ಬಿಪಿಎಲ್ ಕಾರ್ಡ್ ಹಿಡಿದುಕೊಂಡಿರುವುದು ತಪ್ಪು. ಸ್ವಯಂ ಪ್ರೇರಿತರಾಗಿ ಎಪಿಎಲ್ಗೆ ಬಂದುದು ಒಳಿತು, ಇಲ್ಲದಿದ್ದರೆ ನಿಜವಾದ ಬಡವರಿಗೆ ಸಿಗಬೇಕಾದ ಹಕ್ಕು ಕಸಿದುಕೊಂಡಂತಾಗುತ್ತದೆ,” ಎಂದು ಹೇಳಿದರು.

ಕೇಂದ್ರ-ರಾಜ್ಯ ಅಂಕಿ ಅಂಶದಲ್ಲಿ ವ್ಯತ್ಯಾಸ
ಕೇಂದ್ರ ಸರ್ಕಾರ 7.7 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳ ಮಾಹಿತಿ ನೀಡಿದ್ದರೆ, ರಾಜ್ಯ ಸರ್ಕಾರ 13 ಲಕ್ಷದಷ್ಟು ಕಾರ್ಡ್ಗಳು ಅನರ್ಹ ಎಂದು ಅಂದಾಜಿಸಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಅಂತಿಮ ಅಂಕಿ ಅಂಶವನ್ನು ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.
ಅತಿಯಾಗಿ ಬಿಪಿಎಲ್ ಕಾರ್ಡ್ ಬಳಕೆ
ರಾಜ್ಯದಲ್ಲಿ ಪ್ರಸ್ತುತ 1.28 ಕೋಟಿ ಬಿಪಿಎಲ್ ಕಾರ್ಡ್ಗಳಿದ್ದು, 4.5 ಕೋಟಿ ಜನರನ್ನು ಒಳಗೊಂಡಿವೆ. ಅಂದರೆ ರಾಜ್ಯದ 75% ಜನಸಂಖ್ಯೆ ಬಿಪಿಎಲ್ ವ್ಯಾಪ್ತಿಗೆ ಬಂದಿದೆ. “ಇದು ಅಸಾಧ್ಯ ಮತ್ತು ಅನ್ಯಾಯ. ಗರೀಬರಿಗೆ ಹೋಗಬೇಕಾದ ಸೌಲಭ್ಯ, ಅನರ್ಹರು ಬಳಸುತ್ತಿದ್ದಾರೆ,” ಎಂದು ಮುನಿಯಪ್ಪರು ಒತ್ತಿ ಹೇಳಿದರು.
ಆರ್ಥಿಕವಾಗಿ ಬಲಿಷ್ಠರಿಗೆ ಬಿಪಿಎಲ್ ಅಗತ್ಯವಿಲ್ಲ
“ಇಂದು 5 ಲಕ್ಷ ರೂಪಾಯಿ ಹೂಡಿಕೆ ಮಾಡಿ ಮನೆ ಕಟ್ಟಬಲ್ಲವರು, ವಾಹನ ಹೊಂದಿರುವವರು, ತೆರಿಗೆ ಕಟ್ಟುವವರು ಬಿಪಿಎಲ್ ಕಾರ್ಡ್ ಹಿಡಿಯಬಾರದು. ಇಂಥವರು ಹೊಣೆಗಾರಿಕೆಯಿಂದ ನಡೆದುಕೊಂಡು ಬಿಪಿಎಲ್ನಿಂದ ಹೊರಬಂದರೆ, ನಿಜವಾದ ಬಡ ಕುಟುಂಬಗಳಿಗೆ ನೆರವು ತಲುಪಲು ಸಾಧ್ಯವಾಗುತ್ತದೆ,” ಎಂದು ಹೇಳಿದರು.
ಬಡವರ ಹಕ್ಕಿಗೆ ಸರ್ಕಾರದ ಭರವಸೆ
“ಅನರ್ಹರು ಸ್ವಯಂ ಪ್ರೇರಿತವಾಗಿ ಬಿಪಿಎಲ್ನಿಂದ ಹೊರಬಂದರೆ, 2 ವರ್ಷಗಳಿಂದ ಕಾಯುತ್ತಿರುವ ನಿಜವಾದ ಬಡ ಕುಟುಂಬಗಳಿಗೆ ಸರ್ಕಾರದ ಯೋಜನೆಗಳು ತಲುಪುತ್ತವೆ. ಇದು ಬಡವರ ಹಿತಕ್ಕಾಗಿ ಸರ್ಕಾರ ಕೈಗೊಂಡಿರುವ ನಿಷ್ಠಾವಂತ ಕ್ರಮ,” ಎಂದು ಸಚಿವರು ಸ್ಪಷ್ಟಪಡಿಸಿದರು.