Home ಆರೋಗ್ಯ ಪ್ರಧಾನಿಗಳೇ ಲಸಿಕೆ ಪಡೆದಿರುವಾಗ ಅಂಜಿಕೆ ಏಕೆ?

ಪ್ರಧಾನಿಗಳೇ ಲಸಿಕೆ ಪಡೆದಿರುವಾಗ ಅಂಜಿಕೆ ಏಕೆ?

51
0

ಯಾವುದೇ ಅಂಜಿಕೆ ಇಲ್ಲದೆ ಕೋವಿಡ್ ಲಸಿಕೆ ಪಡೆಯಿರಿ: ಸಚಿವ ಸುಧಾಕರ್

ಶಿರಸಿ/ಬೆಂಗಳೂರು:

ಮೂರನೇ ಹಂತದ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡದೆ ವಿಶ್ವಾಸದಿಂದ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ಶಿರಸಿಯಲ್ಲಿ ಕೋವಿಡ್ ಲಸಿಕೆ ಅಭಿಯಾನದ ಮೂರನೇ ಹಂತಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲ ಹಂತದ ಕೋವಿಡ್ ಲಸಿಕೆ ಬೆಂಗಳೂರು, ಎರಡನೇ ಹಂತದ ಲಸಿಕೆ ಹೈದರಾಬಾದ್ ಕರ್ನಾಟಕ ಹಾಗೂ ಮೂರನೇ ಹಂತದ ಲಸಿಕೆಯನ್ನು ಶಿರಸಿಯಲ್ಲಿ ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರು, ವೃದ್ಧರು, 45 ವರ್ಷ ಮೇಲ್ಪಟ್ಟ ಕೋಮಾರ್ಬಿಡಿಟಿ ಇರುವವರಿಗೆ ನೀಡಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರು 50 ಲಕ್ಷ, ಕೋಮಾರ್ಬಿಡಿಟಿ ಹೊಂದಿರುವ 16 ಲಕ್ಷ ಜನರಿದ್ದಾರೆ ಎಂದು ಅಂದಾಜಿಸಲಾಗಿದೆ. ಇಂತಹವರಿಗೆ ಲಸಿಕೆ ನೀಡದೇ ಇದ್ದಲ್ಲಿ, ಅವರಿಗೆ ವ್ಯಾಧಿ ತೀವ್ರವಾಗಿ ಸಾವು ಉಂಟಾಗಬಹುದು. ಎಲ್ಲರಿಗೂ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿಯವರು ಏಮ್ಸ್ ಗೆ ಹೋಗಿ ಲಸಿಕೆ ಪಡೆದಿದ್ದಾರೆ. ಪ್ರಧಾನಿಗಳೇ ಲಸಿಕೆ ಪಡೆದ ಬಳಿಕ ಯಾರೂ ಅಂಜಬೇಕಿಲ್ಲ ಎಂದರು.

covid vaccination Sirsi

ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಪ್ರಕಟಿಸುವವರು ಇದ್ದಾರೆ. ಜನರು ಸರ್ಕಾರ ಪ್ರಕಟಿಸುವ ಮಾಹಿತಿಯನ್ನು ಮಾತ್ರ ನೋಡಿ ಅದನ್ನು ಪಾಲಿಸಬೇಕು. ಲಸಿಕೆ ಪಡೆದ ಬಳಿಕ ಕೋವಿಡ್ ಸೋಂಕು ಬಂದರೆ ಅಂತಹವರಿಗೆ ಹೆಚ್ಚು ಸಮಸ್ಯೆ ಉಂಟಾಗುವುದಿಲ್ಲ. ಶಿಸ್ತಿನ ಜೀವನ, ಉತ್ತಮ ಆಹಾರದಿಂದ ಆರೋಗ್ಯವಾಗಿರಬಹುದು. ಇದರಿಂದಾಗಿ ಆರ್ಥಿಕ ಪ್ರಗತಿ, ಶೈಕ್ಷಣಿಕ ಪ್ರಗತಿ ಉಂಟಾಗುತ್ತದೆ. ಆರೋಗ್ಯವೇ ಇಲ್ಲದಿದ್ದರೆ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ರಾಷ್ಟ್ರೀಯ ಆರ್ಥಿಕ ಸಂಸ್ಥೆಯವರು ಬಿಡುಗಡೆ ಮಾಡಿದ ವರದಿಯಲ್ಲಿ, ಪ್ರತಿ ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ 8% ಹಣ ಮೀಸಲಿಡಬೇಕು ಎಂದು ಸಲಹೆ ನೀಡಿದ್ದಾರೆ. ಮಾನವ ಸಂಪನ್ಮೂಲ ಕೂಡ ಹೆಚ್ಚಿಸಬೇಕು ಎನ್ನಲಾಗಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ನೀಗಿಸಲು 2,150 ವೈದ್ಯರ ನೇರ ನೇಮಕ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ಕೆಲಸ ಮಾಡುವವರಿಗೆ ಬೇಗನೆ ಬಡ್ತಿ ಮೊದಲಾದ ವಿಶೇಷ ಸೌಲಭ್ಯ ನೀಡುವ ಬಗ್ಗೆ ಚಿಂತನೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ 24 ಗಂಟೆ ಸೇವೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿದ್ದರು.

  • 3 ನೇ ಹಂತದ ಲಸಿಕೆ ನೀಡಲು 270 ಕ್ಕೂ ಅಧಿಕ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಸ್ವಯಂಪ್ರೇರಣೆಯಿಂದ ಬಂದು ಲಸಿಕೆ ಪಡೆಯಿರಿ.
  • ಉತ್ತರ ಕನ್ನಡ ಜಿಲ್ಲೆಯ ಜನರು ಹೆಚ್ಚು ಸಂಖ್ಯೆಯಲ್ಲಿ ಲಸಿಕೆ ಪಡೆದು ಬೇರೆಯವರಿಗೆ ಮಾದರಿಯಾಗಬೇಕು.
  • ಆನ್ ಲೈನ್ ನಲ್ಲೇ ನೋಂದಣಿಯಾಗಬೇಕೆಂದಿಲ್ಲ. ನೇರವಾಗಿ ಲಸಿಕಾ ಕೇಂದ್ರಕ್ಕೆ ಬಂದು ನೋಂದಾಯಿಸಬಹುದು.
  • ಕೋವಿಡ್ ಎರಡನೇ ಅಲೆ ಪಕ್ಕದ ರಾಜ್ಯಗಳಲ್ಲಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.

LEAVE A REPLY

Please enter your comment!
Please enter your name here