Wife runs away with other man: Husband commits suicide after killing two children in Bengaluru
ಆನೇಕಲ್ (ಬೆಂಗಳೂರು):
ಪತ್ನಿ ಪರ ಪುರುಷನೊಂದಿಗೆ ಓಡಿಹೋಗಿದ್ದರಿಂದ ಮನನೊಂದ ವ್ಯಕ್ತಿಯೋರ್ವ ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆನೇಕಲ್ನ ಕೊಪ್ಪ ಸಮೀಪದ ನಿರ್ಮಣ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು ಬಿಟಿಎಂ ಬಡಾವಣೆ ನಿವಾಸಿ 35 ವರ್ಷದ ಹರೀಶ್ ತನ್ನ ಇಬ್ಬರು ಮಕ್ಕಳಾದ 6 ವರ್ಷದ ಪ್ರಜ್ವಲ್ ಹಾಗೂ 4 ವರ್ಷದ ರಿಷಬ್ ನನ್ನು ಕೊಂದು ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೇ 10ರಂದೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಹರೀಶ್ ಸ್ನೇಹಿತರೊಬ್ಬರಿಗೆ ವಾಟ್ಸಾಪ್ ಕಾಲ್ ಮಾಡಿದ್ದಾನೆ. ಈ ವೇಳೆ ತಾನು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗುತ್ತಿದ್ದು ನನಗೆ ಬರಬೇಕಾದ ಹಣ ಮತ್ತು ಎಲ್ಐಸಿ ಬಾಂಡ್ ಪತ್ನಿಗೆ ಕೊಡಿ ಎಂದು ಹೇಳಿಕೊಂಡಿದ್ದಾನೆ.
ಹರೀಶ್ 2007ರಲ್ಲಿ ತನ್ನ ಅಕ್ಕನ ಮಗಳು ಅನನ್ಯಳನ್ನು ಮದುವೆಯಾಗಿದ್ದರು. ಆದರೆ ಪತ್ನಿಯ ಐಷಾರಾಮಿ ಜೀವನಕ್ಕೆ ಜೋತುಬಿದ್ದಿದ್ದಳು. ಹೀಗಾಗಿ ಇಬ್ಬರ ನಡುವೆ ಗಲಾಟೆಗಳಾಗುತ್ತಿತ್ತು. ನಂತರ 2015ರಲ್ಲಿ ಹಿರಿಯ ಸಮ್ಮುಖದಲ್ಲಿ ರಾಜಿ ಸಂಧಾನ ಸಹ ಮಾಡಲಾಗಿತ್ತು. ಆದರೂ ಇದು ಫಲನೀಡಲಿಲ್ಲ. ಗಲಾಟೆ ನಡುವೆ ಜೀವನ ಸಾಗಿಸುತ್ತಿದ್ದರು. ಆದರೆ ಒಂದು ದಿನ ಅನನ್ಯ ಮನೆ ಬಿಟ್ಟು ಪರ ಪುರುಷನೊಂದಿಗೆ ಓಡಿಹೋಗಿದ್ದಳು. ಇದರಿಂದ ಪುಟ್ಟ ಮಕ್ಕಳನ್ನು ಹರೀಶ್ ನೋಡಿಕೊಳ್ಳುತ್ತಿದ್ದರು.
ಆದರೆ ಓಡಿ ಹೋಗಿದ್ದ ಅನನ್ಯ ನಂತರ ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ಕೊಡದಿದ್ದರೆ ಮನೆ ಬಳಿ ಬಂದು ಜಗಳ ಮಾಡುತ್ತಿದ್ದಳು. ಈ ಘಟನೆಗಳಿಂದ ಬೇಸತ್ತಿದ್ದ ಹರೀಶ್ ಆತ್ಮಹತ್ಯೆಯ ದುಡುಕು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
