ಬೆಂಗಳೂರು:
ಕೇಂದ್ರದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ವರೆಗೆ ವಿಶ್ರಮಿಸುವುದಿಲ್ಲ ಎಂದು ರಾಜ್ಯದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ಬೆಂಬಲಿಸಲಿದ್ದಾರೆ. ಮೋಸಗಾರರಾದ ಕಾಂಗ್ರೆಸ್‍ನವರನ್ನು ಬೆಂಬಲಿಸುವುದಿಲ್ಲ; ಬಿಜೆಪಿ ಕಳೆದ ಬಾರಿ 25 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ಸಿಗೆ ಕೇವಲ ಒಂದು ಸ್ಥಾನ ಮಾತ್ರ ಸಿಕ್ಕಿತ್ತು ಎಂದು ತಿಳಿಸಿದರು.
ಅಲ್ಲೊಬ್ಬರು, ಇಲ್ಲೊಬ್ಬರು ಪಕ್ಷದ ನಾಯಕರ ವಿರುದ್ಧ ಮಾತನಾಡುವುದು ಮತ್ತು ಆಪಾದನೆ ಮಾಡುವುದು ಸೂಕ್ತವಲ್ಲ ಎಂದು ಮುಖಂಡರು ಸೂಚಿಸಿದ್ದಾರೆ. ಬಿಜೆಪಿಯಲ್ಲಿ ಬಹಿರಂಗ ಹೇಳಿಕೆ ಕೊಡುವ ಪ್ರಶ್ನೆ ಇಲ್ಲ. ನಮ್ಮ ಪಕ್ಷದಲ್ಲಿ ಇನ್ನು ಮುಂದೆ ಅಶಿಸ್ತು ಇರುವುದಿಲ್ಲ ಎಂಬ ವಿಶ್ವಾಸ ನಮಗೆಲ್ಲರಿಗೂ ಇದೆ ಎಂದರು.
ಗ್ಯಾರಂಟಿಗಳನ್ನು ಕೊಟ್ಟು ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿದೆ. ಅವರು ಇದೀಗ ವಿದ್ಯುತ್ ದರ ಏರಿಸಿ ಬರೆ ಎಳೆದಿದ್ದಾರೆ. 200 ಯೂನಿಟ್ ವಿದ್ಯುತ್ ಉಚಿತ ಎಂದಿದ್ದರು. ವಿದ್ಯುತ್ ದರ ಏರಿಕೆ, ದಿನ ಬಳಕೆ ವಸ್ತುಗಳ ದರ ಏರಿಕೆಯಿಂದ ಜನಜೀವನ ಕಷ್ಟವಾಗಿದೆ. ನಿರುದ್ಯೋಗ ಭತ್ಯೆ, ಗೃಹಿಣಿಗೆ 2 ಸಾವಿರ ಕೊಡುವುದಾಗಿ ಹೇಳಿದ್ದು, ಅದು ಜಾರಿ ಆಗಿಲ್ಲ ಎಂದು ಆಕ್ಷೇಪಿಸಿದರು.
ಅಕ್ಕಿ ವಿಚಾರದಲ್ಲಿ ಕೇಂದ್ರವನ್ನು ಎಳೆದು ತಂದದ್ದು ಸರಿಯಲ್ಲ. 10 ಕೆಜಿ ಅಕ್ಕಿ ಕೊಡಲಾಗದುದಕ್ಕೆ ಹಣ ಕೊಡಲು ಕೇಳಿದ್ದೆವು. ಈಗ 5 ಕೆಜಿಗೆ 170 ರೂ. ಕೊಡುವುದಾಗಿ ಹೇಳಿದ್ದಾರೆ. ಕೇಂದ್ರದ 5 ಕೆಜಿಗೂ ನಿಮಗೂ ಸಂಬಂಧ ಇಲ್ಲ. ಆದ್ದರಿಂದ ಮಾರುಕಟ್ಟೆ ದರದಂತೆ ಪ್ರತಿ ಮನೆಯ ಪ್ರತಿ ವ್ಯಕ್ತಿಗೂ 10 ಕೆಜಿ ಅಕ್ಕಿಗೆ ಹಣ ಕೊಡಿ ಎಂದು ಆಗ್ರಹಿಸಿದರು. ಈ ವಿಚಾರದಲ್ಲೂ ಟೋಪಿ ಹಾಕದಿರಿ ಎಂದು ತಿಳಿಸಿದರು.
ಮನೆಯೊಡತಿಗೆ 2 ಸಾವಿರ ಕೊಡುವ ವಿಚಾರದಲ್ಲೂ ಮೋಸ ಆಗಿದೆ. ಇದರ ದಿನಾಂಕ ಪ್ರಕಟಿಸಿ ಎಂದು ಒತ್ತಾಯಿಸಿದರು. ಉಚಿತ ಬಸ್ ವಿಚಾರದಲ್ಲೂ ಮೋಸವಾಗಿದೆ; ಖಾಸಗಿ ಬಸ್ಸಿನಲ್ಲಿ ಓಡಾಡುವವರು ನಿಮ್ಮ ಮತದಾರರಲ್ಲವೇ? ಎಂದು ಕೇಳಿದರು. ಆಟೋ ರಿಕ್ಷಾದವರ ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆ ಹಾಕುವಂತಾಗಿದೆ ಎಂದರಲ್ಲದೆ, ಖಾಸಗಿ ಬಸ್ ಸಿಬ್ಬಂದಿ ಪರಿಸ್ಥಿತಿ ಸುಧಾರಣೆ ಹೇಗೆ ಎಂದು ಕೇಳಿದರು.
ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ಕೊಟ್ಟ ಆಶ್ವಾಸನೆ ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ಹೋರಾಟ ಮಾಡಲಿದೆ. ವಿಧಾನಮಂಡಲದ ಒಳಗೆ ನಮ್ಮ ಪಕ್ಷದ ಶಾಸಕರು, ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಯಡಿಯೂರಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುವ ಪ್ರಸ್ತಾಪವನ್ನು ಅವರು ವಿರೋಧಿಸಿದರು. ಎಲ್ಲ ಸಾಧು ಸಂತರ ಆಶಯದಂತೆ ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಬಾರದು; ಗೋಹತ್ಯಾ ನಿಷೇಧ ಕಾಯ್ದೆ ರದ್ದು ಮಾಡುವುದನ್ನು ಕೈಬಿಡಿ. ದ್ವೇಷದ ರಾಜಕಾರಣ ಮಾಡದಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದರು. ಸಿದ್ದರಾಮಯ್ಯನವರು ಕೇರಳ ಸ್ಟೋರಿ ನೋಡಲಿ ಎಂದು ಆಗ್ರಹಿಸಿದರು.
ಬಾಂಬೆ ಬಾಯ್ಸ್ ವಿಚಾರ ನಾನು ಪ್ರಸ್ತಾಪ ಮಾಡಿಲ್ಲ. ಬಿಜೆಪಿಯಲ್ಲಿ ತುಂಬ ಅಶಿಸ್ತಿದೆ; ಇದಕ್ಕೇನು ಕಾರಣ ಎಂದು ಪತ್ರಕರ್ತರು ಈಚೆಗೆ ಪ್ರಶ್ನಿಸಿದ್ದರು. ಕಾಂಗ್ರೆಸ್ಸಿನ ಅಶಿಸ್ತಿನ ಗಾಳಿ ಬೀಸಿದೆಯೇ ಎಂದೂ ಕೇಳಿದ್ದರು. ಕಾಂಗ್ರೆಸ್ ಅಶಿಸ್ತು ನಮ್ಮ ಪಕ್ಷದ ಮೇಲೂ ಬೀಸುತ್ತಿದೆ ಎಂದು ಹೇಳಿದ್ದೆ. ಅದನ್ನು ಬಿಜೆಪಿ ಸೇರಿದ 17 ಜನ ಶಾಸಕರ ಜೊತೆ ಸೇರಿಸುವ ಪ್ರಯತ್ನ ನಡೆಯಿತು ಎಂದು ವಿವರ ನೀಡಿದರು.
ಇತರ ಪಕ್ಷಗಳಿಂದ 17 ಜನರು ಬಂದ ಬಳಿಕ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದಿದ್ದೆ. ಆದರೆ, ಒಂದು ಟಿ.ವಿ.ಯಿಂದ ಈ ಸಮಸ್ಯೆ ಆಗಿದೆ. ಸಂಬಂಧಿತ ಟಿ.ವಿ.ಗೆ ಕೂಡಲೇ ಮಾತನಾಡಿ, ವಿಷಯ ತಿಳಿಸಿದ್ದೇನೆ ಎಂದು ಹೇಳಿದರು. ಕಾಂಗ್ರೆಸ್- ಜೆಡಿಎಸ್‍ನಿಂದ ನಮ್ಮ ಪಕ್ಷಕ್ಕೆ ಬಂದ ಶಾಸಕರಿಂದ ಅಶಿಸ್ತು ಆಗಿಲ್ಲ. ಅವರಿಂದ ಸರಕಾರ ಅಧಿಕಾರಕ್ಕೆ ಬಂದಿದೆ. ಅವರ ಬಗ್ಗೆ ಒಂದೇ ಒಂದು ಆಪಾದನೆ ಮಾಡಿಲ್ಲ. ಅವರು ಶಿಸ್ತಿನಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಚುನಾವಣೆ ಮುಗಿದ ಬಳಿಕ ಒಬ್ಬರ ಮೇಲೊಬ್ಬರು ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ. ಹಿರಿಯರ ತಪಸ್ಸಿನ ಫಲ ಬಿಜೆಪಿ ಬೆಳವಣಿಗೆಯ ಹಿಂದಿದೆ. ಕಾಂಗ್ರೆಸ್ ಪಕ್ಷದ ಮೋಸದ ಗ್ಯಾರಂಟಿಯಿಂದ ಅವರಿಗೆ ಪ್ರಯೋಜನ ಲಭಿಸಿತು. ಚುನಾವಣೆ ಫಲಿತಾಂಶವನ್ನು ಕೆಟ್ಟ ಕನಸೆಂದು ಭಾವಿಸಿದ್ದೇವೆ. ನರೇಂದ್ರ ಮೋದಿಜಿ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಲು 7 ತಂಡಗಳಾಗಿ ರಾಜ್ಯ ಪ್ರವಾಸ ಮಾಡಿದ್ದು, ಕಾರ್ಯಕರ್ತರ ಸಮಾವೇಶಗಳು ಯಶಸ್ವಿಯಾಗಿದೆ. ಒಂದೆರಡು ಕಡೆ ಸಣ್ಣಪುಟ್ಟ ಗೊಂದಲ ಉಂಟಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಾತನಾಡಿ, ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಅವರ ನೇತೃತ್ವದಲ್ಲಿ ಇದೇ 3ರಂದು ಸಂಜೆ ರಾಜ್ಯದ ಪದಾಧಿಕಾರಿಗಳು, ಶಾಸಕರು ಸೇರಿದಂತೆ ಮುಖಂಡರ ಸಭೆ ಕರೆಯಲಾಗಿದೆ. 4ನೇ ತಾರೀಕಿನ ಹೋರಾಟದ ಬಗ್ಗೆ ಸಭೆ ಚರ್ಚಿಸಲಿದೆ. ಕಂಡಿಷನ್ ಕೈಬಿಟ್ಟು ಗ್ಯಾರಂಟಿ ಅನುಷ್ಠಾನಕ್ಕೆ ತರಲು ಆಗ್ರಹಿಸಿ 4ರಂದು ಹೋರಾಟ ನಡೆಯಲಿದೆ ಎಂದು ವಿವರಿಸಿದರು.
ಕೇಂದ್ರದ ಬಿಜೆಪಿ ಸರಕಾರಕ್ಕೆ 9 ವರ್ಷ ತುಂಬುವ ಹಿನ್ನೆಲೆಯಲ್ಲಿ ನಮ್ಮ ಕಾರ್ಯವೈಖರಿ, ಬಿಬಿಎಂಪಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭೆ ಚುನಾವಣೆ ಚುನಾವಣೆಯಲ್ಲಿ ನಮ್ಮ ಕಾರ್ಯತಂತ್ರದ ಕುರಿತು 3ರ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಪಕ್ಷದೊಳಗಿನ ವಿಚಾರಗಳನ್ನು ಪಕ್ಷದಲ್ಲೇ ಚರ್ಚಿಸಲು ಸೂಚಿಸಿದ್ದು, ಅದನ್ನು ಮುಖಂಡರು ಒಪ್ಪಿಕೊಂಡಿದ್ದಾರೆ ಎಂದರು.