ಬೆಂಗಳೂರು : ರಸ್ತೆಯಲ್ಲಿ ಸವಾರನೊಬ್ಬನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ದಾಖಲಾಗಿರುವ ಕೊಲೆಯತ್ನ ಪ್ರಕರಣದಲ್ಲಿ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಸೂಚನೆ ನೀಡಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ನೀಡಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್, ಬೈಕ್ ಸವಾರ ವಿಕಾಸ್ ನಡೆಸಿದ ಹಲ್ಲೆಯಿಂದ ಶಿಲಾದಿತ್ಯಗೆ ಗಂಭೀರ ಗಾಯವಾಗಿದೆ. ವಿಕಾಸ್‌ಗೆ ಸಣ್ಣ ಗಾಯವೆಂದು ಎಫ್‌ಐಆರ್‌ನಲ್ಲೇ ಉಲ್ಲೇಖವಾಗಿದೆ. ಆದರೂ ಶಿಲಾದಿತ್ಯ ವಿರುದ್ಧ ಕೊಲೆಯತ್ನದ ಎಫ್‌ಐಆರ್ ದಾಖಲಿಸಲಾಗಿದೆ. 12 ಗಂಟೆ ವಿಳಂಬವಾಗಿ ದೂರು ದಾಖಲಿಸಲಾಗಿದೆ ಎಂದು ವಾದ ಮಂಡಿಸಿದರು.

ವಾದ ಆಲಿಸಿದ ನ್ಯಾಯಪೀಠ, ಶಿಲಾದಿತ್ಯ ಬೋಸ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು. ಶಿಲಾದಿತ್ಯ ಬೋಸ್ ಪೊಲೀಸರ ವಿಚಾರಣೆಗೆ ಸಹಕರಿಸಬೇಕು. ಸಮನ್ಸ್ ನೀಡುವಾಗ ಕಾನೂನಿನ ಪ್ರಕ್ರಿಯೆ ಪಾಲಿಸಬೇಕು. ಹೈಕೋರ್ಟ್ ಅನುಮತಿ ಇಲ್ಲದೇ ದೋಷಾರೋಪ ಪಟ್ಟಿ ಸಲ್ಲಿಸಬಾರದು ಎಂದು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ನೀಡಿದೆ.
ಅಲ್ಲದೆ, ದೂರುದಾರ ವಿಕಾಸ್ ಕುಮಾರ್‌ಗೂ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿದೆ.