ಒಡೆಯರ್ ಎಕ್ಸ್ಪ್ರೆಸ್ಗೆ ರಾಮನಗರ ನಿಲುಗಡೆಗೆ ಅನುಮತಿ; ಕುಮಾರಸ್ವಾಮಿ-ಸೋಮಣ್ಣ ಸಂಯುಕ್ತ ಪರಿವೀಕ್ಷಣೆ
ಬೆಂಗಳೂರು: ಕರ್ನಾಟಕದ ಪ್ರಯಾಣಿಕರಿಗೆ ಮಹತ್ವದ ಬೆಳವಣಿಗೆಯಾಗಿ ಒಡೆಯರ್ ಎಕ್ಸ್ಪ್ರೆಸ್ ರೈಲಿಗೆ ರಾಮನಗರದಲ್ಲಿ ನಿಲುಗಡೆ ನೀಡಲು ರೈಲ್ವೆ ಮಂಡಳಿ ಅನುಮತಿ ನೀಡಿದೆ. ಈ ನಿಲುಗಡೆಗಾಗಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಚರ್ಚೆ ನಡೆಸಿದ್ದರು.
ಸಚಿವರು ಸಮಯ ನೀಡಿದ ಬಳಿಕ ಅಧಿಕೃತವಾಗಿ ನಿಲುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿದುಬಂದಿದೆ. ಈ ನಿರ್ಧಾರವು ಬೆಂಗಳೂರು-ಮೈಸೂರು ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ, ವಿಶೇಷವಾಗಿ ರಾಮನಗರ ಜಿಲ್ಲೆಯವರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿರೀಕ್ಷೆಯಿದೆ.
ಇದೇ ವೇಳೆ, ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಮೈಸೂರುವರೆಗೆ ವಿಂಡೋ ಟ್ರೇಲಿಂಗ್ ಪರಿ ಪರಿವೀಕ್ಷಣೆ ನಡೆಸಿದರು.
ಈ ಪರಿವೀಕ್ಷಣೆಯಲ್ಲಿ ದಕ್ಷಿಣ ನೈರುತ್ಯ ರೈಲ್ವೆಯ ವಿಭಾಗೀಯ ವ್ಯವಸ್ಥಾಪಕರು ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಭಾಗಿಯಾಗಿದ್ದರು. ರೈಲು ಮಾರ್ಗ ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿಗಳೂ ಸಹ ಈ ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು.
ಮಾರ್ಗದ ಉದ್ದಕ್ಕೂ ನಿರ್ಮಾಣವಾಗುತ್ತಿರುವ ಅಂಡರ್ಪಾಸ್ಗಳು, ಮೇಲು ಸೇತುವೆಗಳು ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವರು ಖುದ್ದಾಗಿ ವೀಕ್ಷಿಸಿ ಪರಿಶೀಲಿಸಿದರು. ಮಂಡ್ಯ, ರಾಮನಗರ ಹಾಗೂ ಮೈಸೂರು ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಬಾಕಿ ರೈಲ್ವೆ ಯೋಜನೆಗಳ ಕುರಿತು ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಅವುಗಳನ್ನು ಶೀಘ್ರ ಪೂರ್ಣಗೊಳಿಸುವ ಬಗ್ಗೆ ಒತ್ತಾಯಿಸಿದರು.
