ಬೆಂಗಳೂರು : ಪತಿಯಿಂದ 6 ಲಕ್ಷ ರೂ. ಮಾಸಿಕ ಜೀವನಾಂಶ ನೀಡುವಂತೆ ಮಹಿಳೆಯ ಪರ ವಕೀಲರು ವಾದ ಮಂಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶೂ, ಡ್ರೆಸ್, ಬಳೆ ಇತ್ಯಾದಿಗಳಿಗೆ ತಿಂಗಳಿಗೆ 15 ಸಾವಿರ ರೂ. ಹಾಗೂ ಮನೆಯಲ್ಲಿ ಊಟಕ್ಕೆ 60 ಸಾವಿರ ರೂ. ಬೇಕು. ಜತೆಗೆ ಮಹಿಳೆಯ ಮೊಣಕಾಲು ನೋವು, ಫಿಸಿಯೋಥೆರಪಿ ಮತ್ತು ಇತರ ಔಷಧಿಗಳ ವೈದ್ಯಕೀಯ ವೆಚ್ಚಕ್ಕಾಗಿ 4-5 ಲಕ್ಷ ರೂ. ಅಗತ್ಯವಿದೆ. ಒಟ್ಟಾರೆಯಾಗಿ ಪತಿಯು ತಿಂಗಳಿಗೆ 6,16,300 ಜೀವನಾಂಶ ನೀಡಬೇಕು ಎಂದು ಮಹಿಳೆ ಪರ ವಕೀಲರು ಮನವಿ ಮಾಡಿದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಏಕ ಸದಸ್ಯ ಪೀಠ, ಓರ್ವ ವ್ಯಕ್ತಿಗೆ ಮಾಸಿಕವಾಗಿ ಇಷ್ಟು ಮೊತ್ತದ ಅನಿವಾರ್ಯತೆ ಏಕೆ? ಅದೂ ತಿಂಗಳಿಗೆ 6,16,300 ರೂ. ಯಾರಾದರೂ ಇಷ್ಟು ಹಣ ಖರ್ಚು ಮಾಡುತ್ತಾರೆಯೇ? ಅಷ್ಟು ಹಣವನ್ನು ಖರ್ಚು ಮಾಡಲು ಬಯಸಿದರೆ, ಅವರು ದುಡಿದು ಸಂಪಾದಿಸಬಹುದು, ಹೊರತಾಗಿ ಈ ರೀತಿಯಲ್ಲಿ ಅಲ್ಲ.
ಜೊತೆಗೆ ಅರ್ಜಿದಾರ ಮಹಿಳೆ ಉದ್ದೇಶಿಸಿ ನಿಮಗೆ ಕುಟುಂಬದ ಬೇರಾವ ಜವಾಬ್ದಾರಿ ಇಲ್ಲವೇ? ಮಕ್ಕಳನ್ನು ನೋಡಿಕೊಳ್ಳಬೇಕಾಗಿಲ್ಲದೆ ಇದ್ದರೂ ಸ್ವತಃ ಖರ್ಚಿಗೆ ಈ ರೀತಿಯಲ್ಲಿ ದೊಡ್ಡ ಮೊತ್ತದ ನಿರೀಕ್ಷೆ. ದಯಮಾಡಿ ಓರ್ವ ವ್ಯಕ್ತಿಯ ಜೀವನ ನಿರ್ವಹಣೆಗೆ ಬೇಕಾಗಿರುವುದು ಇಷ್ಟೇ ಎಂದು ಹೇಳಬೇಡಿ. ನೀಡುವ ಕಾರಣವೂ ಸಮಂಜಸವಾಗಿರಬೇಕು. ಇಲ್ಲಿ ನ್ಯಾಯಾಲಯದ ಪ್ರಕ್ರಿಯೆಯ ದುರ್ಬಳಕೆ ಸ್ಪಷ್ಟವಾಗಿ ತಿಳಿದು ಬರುತ್ತದೆ ಎಂದು ಖಾರವಾಗಿ ಹೇಳಿದೆ.