ಬೆಂಗಳೂರು:
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು ಮತಗಟ್ಟೆ ತರಬೇತಿ ನೀಡುವಾಗ ಉದ್ಧಟತನ ತೋರಿದ ಮಹಿಳಾ ಇನ್ಸ್‌ಪೆಕ್ಟರ್ ಭವ್ಯ ಎಂಬುವರನ್ನು ಅಮಾನತು ಮಾಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಮಾನತು ಆದೇಶವನ್ನು ಹೊರಡಿಸಿದ್ದಾರೆ.
ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತರಬೇತಿಗೆ ನಿಯೋಜನೆ ಮಾಡಲಾಗಿತ್ತು. ಈ ವೇಳೆ ತರಬೇತಿಗೆ ಹಾಜರಾಗದೆ ಪೇಪರ್ ಓದುತ್ತಾ ಕುಳಿತಿದ್ದ ಭವ್ಯರನ್ನು ನೋಡಲ್ ಅಧಿಕಾರಿ ಹಾಗೂ ಸೆಕ್ಟರ್ ಅಧಿಕಾರಿ ಪ್ರಶ್ನಿಸಿದರು. ಈ ವೇಳೆ ಉದ್ಧಟತನ ಮಾತುಗಳನ್ನು ಆಡಿದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಭವ್ಯ ಅವರನ್ನು ಅಮಾನತು ಮಾಡಲಾಗಿದೆ.
ನಾನು ಮಾಡುತ್ತಿರುವುದು ಸರಿ, ತರಬೇತಿ ಕೊಡುವುದು ನಿಮ್ಮ ಕೆಲಸ, ತರಬೇತಿ ಪಡೆಯುವುದು ಬಿಡುವುದು ನಮ್ಮಿಷ್ಟ. ನೀವ್ ಹೇಳಿದಂತೆ ಕೇಳುವುದಕ್ಕೆ ನಾನು ನಿಮ್ಮ ಡಿಪಾರ್ಟ್‌ಮೆಂಟ್ ಅಲ್ಲ. ಈ ತರಬೇತಿ ಉಪಯೋಗಕ್ಕಿಲ್ಲ. ಯಾರಿಗಾದರೂ ಹೇಳಿಕೊಳ್ಳಿ ಎಂದು ಮಹಿಳಾ ಇನ್ಸ್‌ಪೆಕ್ಟರ್ ಉದ್ಧಟತನ ಮೆರೆದಿದ್ದಾರೆ. ಹೀಗಾಗಿ ಅಧಿಕಾರಿಗಳು ಬಿಬಿಎಂಪಿ ಆಯುಕ್ತರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯಡಿ ಮಹಿಳಾ ಇನ್ಸ್‌ಪೆಕ್ಟರ್ ಭವ್ಯಾರನ್ನು ಜಿಲ್ಲಾ ಚುನಾವಣಾಧಿಕಾರಿ ಅಮಾನತು ಮಾಡಿದ್ದಾರೆ.