ಮಂಗಳೂರು: ನಗರದ ಪಾಂಡೇಶ್ವರದ ಪಬ್‌ವೊಂದಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ನಿಂದನೆ ಮಾಡಿರುವ ಆರೋಪದಲ್ಲಿ ನಾಲ್ವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಪುತ್ತೂರು ನಿವಾಸಿಗಳಾದ ಮಹೇಶ್ (28), ವಿನಯ್ (30), ನಿತೇಶ್ (32), ಪ್ರಿತೇಶ್ (33) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಪಾಂಡೇಶ್ವರದ ಮಾಲ್‌ವೊಂದರಲ್ಲಿರುವ ಪಬ್‌ಗೆ ಶನಿವಾರ ಮಹಿಳೆಯೊಬ್ಬರು ತನ್ನ ಗೆಳತಿ ಜತೆ ತೆರಳಿದ್ದರು. ಅಲ್ಲಿ ಪುತ್ತೂರಿನ ಯುವಕರ ತಂಡವೊಂದು ಪಾರ್ಟಿಯಲ್ಲಿ ತೊಡಗಿತ್ತು. ನಂತರ ಮಹಿಳೆಗೆ ಕಿರುಕುಳ ನೀಡಿದ ಯುವಕರು ಮಹಿಳೆಯ ಜತೆ ಅಸಭ್ಯವಾಗಿ ವರ್ತಿಸಿ, ಅವರನ್ನು ಚುಡಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ.
ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಒಬ್ಬನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರೆ, ಮೂವರನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಿದೆ ಎಂದು ತಿಳಿದುಬಂದಿದೆ.