ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ದಕ್ಷಿಣ ಪಶ್ಚಿಮ ರೈಲ್ವೆಯ ಬೆಂಗಳೂರು ವಿಭಾಗವು ಬೆಂಗಳೂರು–ಮೈಸೂರು ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ ಸಂಚಲಿಸಿ ವಿಶೇಷವಾಗಿ ಆಚರಿಸಿತು.
ಟ್ರೈನ್ ಸಂಖ್ಯೆ 20607 ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ – ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಂಗಳೂರು–ಮೈಸೂರು ನಡುವೆ ಮಹಿಳಾ ಸಿಬ್ಬಂದಿಯಿಂದ ಸಂಚಲಿಸಲಾಯಿತು. ಇದು ಭಾರತೀಯ ರೈಲ್ವೆಯ ಪ್ರಮುಖ ಕಾರ್ಯಾಚರಣೆಗಳಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ.

ಈ ಸಂದರ್ಭದಲ್ಲಿ ಶ್ರೀಮತಿ ಬಲ್ಲಾ ಶಿವಪಾರ್ವತಿ ಲೋಕೋ ಪೈಲಟ್ ಆಗಿ, ಶ್ರೀಮತಿ ಅಶ್ವತಿ ಎಸ್ ನಾಯರ್ ಸಹಾಯಕ ಲೋಕೋ ಪೈಲಟ್ ಆಗಿ ಹಾಗೂ ಶ್ರೀಮತಿ ಪ್ರಿಯದರ್ಶಿನಿ ಟ್ರೈನ್ ಮ್ಯಾನೇಜರ್ (ಗಾರ್ಡ್) ಆಗಿ ಕಾರ್ಯನಿರ್ವಹಿಸಿದರು.
ಈ ರೈಲನ್ನು ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕಿ ಶ್ರೀಮತಿ ಪ್ರಿಯಾ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ (ಸಮನ್ವಯ) ಶ್ರೀಮತಿ ಉಮಾ ಶರ್ಮಾ, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಶ್ರೀಮತಿ ನಿವೇದಿತಾ ಬಲರಡ್ಡಿಯವರ ಮತ್ತು ವಿಭಾಗೀಯ ವಿದ್ಯುತ್ ಅಭಿಯಂತರ (ಟ್ರಾಕ್ಷನ್ ಆಪರೇಷನ್ಸ್) ಶ್ರೀ ಅಖಿಲ್ ಮಟ್ಟು ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿ ಹಾಗೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ಗೌರವಿಸಲಾಯಿತು, ಮಹಿಳೆಯರ ಸಾಧನೆ ಹಾಗೂ ಸಮಾಜದಲ್ಲಿ ಅವರ ಕೊಡುಗೆಯನ್ನು ಸ್ಮರಿಸಲಾಯಿತು.
