ಬೆಂಗಳೂರು, ಜನವರಿ 1: ಹೊಸ ವರ್ಷದ ಮೊದಲ ದಿನವೇ ಬೆಂಗಳೂರು ನಗರವು ಪಾದಚಾರಿ ಸ್ನೇಹಿ ನಗರ ಪರಿಕಲ್ಪನೆಗೆ ಐತಿಹಾಸಿಕ ರೂಪ ನೀಡಿದ್ದು, ವಿಶ್ವದ ಅತಿ ಉದ್ದದ 26 ಕಿಲೋಮೀಟರ್ ಸಮೂಹ ಪಾದಚಾರಿ ಫುಟ್ಪಾತ್ ನಡಿಗೆಯನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಆಶ್ರಯದಲ್ಲಿ ನಡೆದ ಈ ನಡಿಗೆ ಕಾರ್ಯಕ್ರಮವು ಬೆಳಿಗ್ಗೆ 7.00 ಗಂಟೆಗೆ ಆರಂಭಗೊಂಡು, 9ರಿಂದ 76 ವರ್ಷ ವಯಸ್ಸಿನ 300ಕ್ಕೂ ಹೆಚ್ಚು ನಾಗರಿಕರ ಭಾಗವಹಿಸುವಿಕೆಯನ್ನು ಕಂಡಿತು. ನಿಗದಿತ ಮಾರ್ಗದಲ್ಲಿ ಸಂಪೂರ್ಣವಾಗಿ ಫುಟ್ಪಾತ್ಗಳಲ್ಲೇ ನಡೆದು, 165 ಮಂದಿ ಸಂಜೆ 6.30ರವರೆಗೆ 26 ಕಿ.ಮೀ ದೂರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಈ ಐತಿಹಾಸಿಕ ನಡಿಗೆ ಆರ್.ವಿ ರಸ್ತೆ, ಜಯನಗರ, ಸಿದ್ದಾಪುರ, ಲಾಲ್ಬಾಗ್, ಕೆ.ಎಚ್ ರಸ್ತೆ, ಕೆ-100 ಮಾರ್ಗ, ಹೊಸೂರು ರಸ್ತೆ, ರಿಚ್ಮಂಡ್ ರಸ್ತೆ, ಕಬ್ಬನ್ ಪಾರ್ಕ್, ವಿಧಾನಸೌಧ, ಕಬ್ಬನ್ ರಸ್ತೆ, ಹಲಸೂರು ಕೆರೆ, ಕಂಟೋನ್ಮೆಂಟ್ ರೈಲು ನಿಲ್ದಾಣ, ಜಯಮಹಲ್, ಮೇಖ್ರಿ ವೃತ್ತ ಹಾಗೂ ಯಶವಂತಪುರ ಪ್ರದೇಶಗಳನ್ನು ಒಳಗೊಂಡಿತ್ತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕೆ-100 ನಾಗರಿಕ ಜಲಮಾರ್ಗದ 2 ಕಿ.ಮೀ ನಡಿಗೆ ಸೇರಿದ್ದು, ಈ ವೇಳೆ ಭಾಗವಹಿಸಿದವರು ಮೂರು ಕೆಂಪೇಗೌಡ ಗೋಪುರಗಳು, ಒಂದು ಕೆರೆ, ಎರಡು ಉದ್ಯಾನವನಗಳು ಮತ್ತು ನಿರಂತರವಾಗಿ ಅಭಿವೃದ್ಧಿಗೊಂಡ ಪಾದಚಾರಿ ಮಾರ್ಗಗಳನ್ನು ವೀಕ್ಷಿಸಿದರು.

ಹಿರಿಯ ಅಧಿಕಾರಿಗಳ ನೇರ ಭಾಗವಹಿಸುವಿಕೆ
ಈ ನಡಿಗೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಹಾಗೂ ದಕ್ಷಿಣ, ಪಶ್ಚಿಮ ಮತ್ತು ಉತ್ತರ ನಗರ ಪಾಲಿಕೆಗಳ ಆಯುಕ್ತರು ಭಾಗವಹಿಸಿದ್ದು, ಪಾದಚಾರಿ ಸ್ನೇಹಿ ನಗರ ನಿರ್ಮಾಣದತ್ತ ಆಡಳಿತದ ಉನ್ನತ ಮಟ್ಟದ ಬದ್ಧತೆಯನ್ನು ಸ್ಪಷ್ಟಪಡಿಸಿತು.
ನಡಿಗೆಯಲ್ಲಿ ಪಾಲ್ಗೊಂಡ ನಾಗರಿಕರು 26 ಕಿಲೋಮೀಟರ್ ವಿಸ್ತಾರದಲ್ಲಿ ಲಭ್ಯವಿದ್ದ ಫುಟ್ಪಾತ್ ವ್ಯವಸ್ಥೆಯನ್ನು ಶ್ಲಾಘಿಸಿದ್ದು, ಹಿರಿಯ ಅಧಿಕಾರಿಗಳ ವೈಯಕ್ತಿಕ ತೊಡಗಿಸಿಕೊಳ್ಳುವಿಕೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಟ್ರೋಲರ್ ಪರೀಕ್ಷೆ – ಪ್ರಾಯೋಗಿಕ ಅಧ್ಯಯನ
ಪಾದಚಾರಿ ಮಾರ್ಗಗಳ ಉಪಯುಕ್ತತೆಯನ್ನು ಪರೀಕ್ಷಿಸುವ ನಿಟ್ಟಿನಲ್ಲಿ, ಮಕ್ಕಳ ಸ್ಟ್ರೋಲರ್ ಅನ್ನು ಸಂಪೂರ್ಣ 26 ಕಿ.ಮೀ ದೂರ ಫುಟ್ಪಾತ್ ಮೇಲೆಯೇ ತಳ್ಳುವ ಮೂಲಕ ಪರೀಕ್ಷಿಸಲಾಯಿತು. ಬಹುತೇಕ ಮಾರ್ಗಗಳಲ್ಲಿ ಸುಗಮ ಸಂಚಾರ ಸಾಧ್ಯವಿದ್ದರೂ, ಕೆಲವೆಡೆ ರ್ಯಾಂಪ್ಗಳ ಅವಶ್ಯಕತೆ ಇರುವುದನ್ನು ಗುರುತಿಸಲಾಯಿತು, ಅಗತ್ಯ ಸುಧಾರಣೆ ಮಾಡಿದಲ್ಲಿ ಇನ್ನಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ವಾಕಲೂರು ಯೋಜನೆಯ ಸಮನ್ವಯಕರಾದ ಅರುಣ್ ಪೈ ಅವರ ನೇತೃತ್ವದಲ್ಲಿ ನಡೆದ ಈ ನಡಿಗೆ ಕಾರ್ಯಕ್ರಮವು, ಜನಕೇಂದ್ರಿತ, ಸುರಕ್ಷಿತ ಮತ್ತು ಸುಸ್ಥಿರ ನಗರಾಭಿವೃದ್ಧಿಯತ್ತ ಬೆಂಗಳೂರು ಕೈಗೊಂಡಿರುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ಇದು ದೇಶದ ಇತರ ಮಹಾನಗರಗಳಿಗೆ ಮಾದರಿಯಾಗುವ ಮಹತ್ವದ ಹೆಜ್ಜೆಯಾಗಿದೆ.
