ನವದೆಹಲಿ: ಚಿಲ್ಲರೆ ಹಣದುಬ್ಬರ (Retail Inflation) ಪ್ರಮಾಣ 11 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಬೆನ್ನಲ್ಲೇ ಇದೀಗ ಸಗಟು (ಹೋಲ್ಸೇಲ್) ದರ ಸೂಚ್ಯಂಕ (WPI) ಆಧಾರಿತ ಹಣದುಬ್ಬರವೂ 21 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ನವೆಂಬರ್ ತಿಂಗಳ ಡಬ್ಲ್ಯುಪಿಐ ಹಣದುಬ್ಬರ ಪ್ರಮಾಣ ಶೇಕಡಾ 5.85ಕ್ಕೆ ಇಳಿಕೆಯಾಗಿರುವುದು ಸರ್ಕಾರದ ದತ್ತಾಂಶಗಳಿಂದ ತಿಳಿದುಬಂದಿದೆ. ಅಕ್ಟೋಬರ್ನಲ್ಲಿ ಹೋಲ್ಸೇಲ್ ಹಣದುಬ್ಬರ ಪ್ರಮಾಣ ಶೇಕಡಾ 8.39ರಷ್ಟಿತ್ತು. ಇದರೊಂದಿಗೆ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಸತತ ಎರಡನೇ ತಿಂಗಳು ಕೂಡ ಎರಡಂಕಿಗಿಂತ ಕೆಳಗಿನ ಮಟ್ಟದಲ್ಲಿದೆ. 2021ರ ಏಪ್ರಿಲ್ ನಂತರ ಸತತ 18 ತಿಂಗಳ ಕಾಲ ಶೇಕಡಾ 10ಕ್ಕಿಂತ ಮೇಲ್ಮಟ್ಟದಲ್ಲಿತ್ತು. 2021ರ ನವೆಂಬರ್ನಲ್ಲಿ ಶೇಕಡಾ 14.87ರಷ್ಟಿತ್ತು.
‘ಆಹಾರ ವಸ್ತುಗಳು, ಲೋಹಗಳು, ಜವಳಿ, ರಾಸಾಯನಿಕ ಮತ್ತು ರಾಸಾಯನಿಕ ಉತ್ಪನ್ನಗಳ ದರ ಇಳಿಕೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಪೇಪರ್ ದರದಲ್ಲಿ ಇಳಿಕೆಯಾಗಿರುವುದು ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಇಳಿಕೆಯಾಗಲು ಕಾರಣ’ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತರಕಾರಿ ದರದಲ್ಲಿ ಶೇಕಡಾ 20.08ರಷ್ಟು ಇಳಿಕೆಯಾಗಿದೆ. ಈರುಳ್ಳಿ ದರ ಶೇಕಡಾ 19.19ರಷ್ಟು ಕುಸಿತವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: Retail Inflation: ಕೊನೆಗೂ ಆರ್ಬಿಐ ಸಹನೆಯ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ; ಶೇ 5.88ಕ್ಕೆ ಇಳಿಕೆ
ಸಗಟು ಆಹಾರ ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಕ್ಟೋಬರ್ನಲ್ಲಿ ಶೇಕಡಾ 6.48 ಇದ್ದುದು ನವೆಂಬರ್ನಲ್ಲಿ ಶೇಕಡಾ 2.17ಕ್ಕೆ ಇಳಿಕೆಯಾಗಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ.
ಇಂಧನ, ವಿದ್ಯುತ್ ಹಣದುಬ್ಬರ ಗರಿಷ್ಠ ಮಟ್ಟದಲ್ಲಿ
ಇಂಧನ ಮತ್ತು ವಿದ್ಯುತ್ ಕ್ಷೇತ್ರದ ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿಯೇ ಇದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 17.35ರಷ್ಟು ಹೆಚ್ಚಾಗಿದೆ. ತಿಂಗಳಿನಿಂದ ತಿಂಗಳಿಗೆ ಹೋಲಿಸಿದರೂ ಹೆಚ್ಚಳ ಕಂಡುಬಂದಿದೆ. ಉಳಿದಂತೆ ಎಲ್ಲ ಕ್ಷೇತ್ರಗಳ ಹಣದುಬ್ಬರ ಇಳಿಕೆಯಾಗಿದೆ. ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಣದುಬ್ಬರ ಕಳೆದ ವರ್ಷಕ್ಕೆ ಹೋಲಿಸಿದರೆ ನವೆಂಬರ್ನಲ್ಲಿ ಶೇಕಡಾ 48.23ರಷ್ಟಿತ್ತು ಎಂದು ಸಚಿವಾಲಯ ತಿಳಿಸಿದೆ.
ನವೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣ ನವೆಂಬರ್ನಲ್ಲಿ ಶೇಕಡಾ 5.88ಕ್ಕೆ ಇಳಿಕೆಯಾಗಿದೆ ಎಂದು ಇತ್ತೀಚೆಗೆ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶದಿಂದ ತಿಳಿದುಬಂದಿತ್ತು. ಹಣದುಬ್ಬರ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರ್ಬಿಐ ಹಣಕಾಸು ನೀತಿ ಸಮಿತಿಯು ಡಿಸೆಂಬರ್ 7ರಂದು ರೆಪೊ ದರವನ್ನು 35 ಮೂಲಾಂಶದಷ್ಟು ಹೆಚ್ಚಿಸಿ ಶೇಕಡಾ 6.25ಕ್ಕೆ ನಿಗದಿ ಮಾಡಿತ್ತು. ಇದರ ಬೆನ್ನಲ್ಲೇ ಹಣದುಬ್ಬರಗಳಲ್ಲಿ ಇಳಿಕೆ ಕಂಡುಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
