ಹೊಸದಿಲ್ಲಿ: ರಿಚಾ ಘೋಷ್(51 ರನ್, 29 ಎಸೆತ),ಎಲ್ಲಿಸ್ ಪೆರ್ರಿ(49 ರನ್, 32 ಎಸೆತ)ಹೋರಾಟದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರವಿವಾರ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್‌ನ 17ನೇ ಪಂದ್ಯದಲ್ಲಿ ಕೇವಲ 1 ರನ್‌ನಿಂದ ಸೋಲುಂಡಿದೆ.
ಗೆಲ್ಲಲು 182 ರನ್ ಗುರಿ ಪಡೆದ ಆರ್‌ಸಿಬಿ ಕೊನೆಯ ತನಕ ಹೋರಾಡಿದ್ದು 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆಯ ಓವರ್‌ನಲ್ಲಿ ಜಯ ದಾಖಲಿಸಿದ ಡೆಲ್ಲಿ ಪ್ಲೇ ಆಫ್‌ಗೆ ತೇರ್ಗಡೆಯಾಗಿದೆ.
ಡೆಲ್ಲಿ ಪರ ಅಲಿಸ್ ಕಾಪ್ಸೆ(1-5), ಅರುಂಧತಿ ರೆಡ್ಡಿ(1-24), ಮರಿಝಾನೆ ಕಾಪ್(1-30) ಹಾಗೂ ಶಿಖಾ ಪಾಂಡೆ(1-34) ತಲಾ ಒಂದು ವಿಕೆಟ್‌ಗಳನ್ನು ಪಡೆದರು. ಆರ್‌ಸಿಬಿಯ ಪರ ದಿಟ್ಟ ಹೋರಾಟ ನೀಡಿದ್ದ ರಿಚಾ ಹಾಗೂ ಎಲ್ಲಿಸ್ ಸೇರಿದಂತೆ ಮೂವರು ಆಟಗಾರ್ತಿಯರು ರನೌಟಾದರು.
ಇದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜೆಮಿಮಾ ರೋಡ್ರಿಗಸ್ ಅರ್ಧಶತಕದ ನೆರವಿನಿಂದ
ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ನಾಯಕಿ ಮೆಗ್ ಲ್ಯಾನ್ನಿಂಗ್(28 ರನ್) ಹಾಗೂ ಶೆಫಾಲಿ ವರ್ಮಾ(23 ರನ್)ಮೊದಲ ವಿಕೆಟ್‌ಗೆ 54 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಆದರೆ ಈ ಇಬ್ಬರು ಬೆನ್ನುಬೆನ್ನಿಗೆ ಔಟಾದರು. ಆಗ ತಂಡಕ್ಕೆ ಆಸರೆಯಾದ ಜೆಮಿಮಾ(58 ರನ್, 36 ಎಸೆತ, 8 ಬೌಂಡರಿ, 1 ಸಿಕ್ಸರ್)ಹಾಗೂ ಅಲಿಸ್ ಕಾಪ್ಸೆ(48 ರನ್, 32 ಎಸೆತ, 8 ಬೌಂಡರಿ) 3ನೇ ವಿಕೆಟ್‌ಗೆ 97 ರನ್ ಜೊತೆಯಾಟ ನಡೆಸಿದರು.
ಆರ್‌ಸಿಬಿ ಪರ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ (4-26)ಯಶಸ್ವಿ ಪ್ರದರ್ಶನ ನೀಡಿದರು.