ಬೆಂಗಳೂರು: ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆಯ ಕಿಚ್ಚು ಮತ್ತೆ ಹೊತ್ತಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು “ಸಿದ್ದರಾಮಯ್ಯ ಅವರ ಬಳಿಕ ನಾಯಕತ್ವ ವಹಿಸಿಕೊಳ್ಳಲು ಸತೀಶ್ ಜಾರಕಿಹೊಳಿ ಸೂಕ್ತ ನಾಯಕ” ಎಂದು ಹೇಳಿರುವುದು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಹೇಳಿಕೆ “ನವೆಂಬರ್ ಕ್ರಾಂತಿ” ಚರ್ಚೆ ವೇಗ ಪಡೆಯುತ್ತಿರುವ ವೇಳೆಯಲ್ಲಿ ಪಾರ್ಟಿಯ ಒಳರಾಜಕೀಯಕ್ಕೆ ಹೊಸ ತಿರುವು ನೀಡಿದೆ.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯತೀಂದ್ರ ಅವರು,
“ಅಪ್ಪನವರು ರಾಜಕೀಯ ಬದುಕಿನ ಕೊನೆ ಘಟ್ಟದಲ್ಲಿದ್ದಾರೆ. ಅವರ ಬಳಿಕ ಸೈದ್ಧಾಂತಿಕ, ಪ್ರಗತಿಪರ ರಾಜಕಾರಣಕ್ಕೆ ದಿಕ್ಕು ತೋರಿಸಲು ಒಬ್ಬ ನಾಯಕ ಬೇಕು. ಸತೀಶ್ ಜಾರಕಿಹೊಳಿ ಅಂತಹ ನಾಯಕರು. ಅವರು ಯುವ ನಾಯಕರಿಗೆ ಮಾದರಿಯಾಗಿದ್ದಾರೆ,” ಎಂದು ಹೇಳಿದ್ದಾರೆ.
ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ, ವಿಶೇಷವಾಗಿ ನವೆಂಬರ್ 20ಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಎರಡೂವರೆ ವರ್ಷ ಪೂರ್ತಿ ಆಗುತ್ತಿರುವ ಸಂದರ್ಭದಲ್ಲಿ. ಪಕ್ಷದ ಒಳ ಒಪ್ಪಂದದ ಪ್ರಕಾರ ಆ ದಿನದ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ಸಿಎಂ ಆಗಲಿದ್ದಾರೆ ಎಂಬ ಮಾತುಗಳು ಹಿಂದೆಂದೇ ಕೇಳಿ ಬರುತ್ತಿದ್ದವು.
ಆದರೆ ಇದೇ ಹೊತ್ತಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಅವರನ್ನು ಉತ್ತರಾಧಿಕಾರಿಯಾಗಿ ಉಲ್ಲೇಖಿಸಿರುವುದರಿಂದ ರಾಜಕೀಯದಲ್ಲಿ ಹೊಸ ಕುತೂಹಲ ಮೂಡಿಸಿದೆ. ಬಳಿಕ ಸ್ಪಷ್ಟನೆ ನೀಡಿದ ಯತೀಂದ್ರ ಅವರು,
“ನಾನು ಹೇಳಿದ್ದು ರಾಜಕೀಯದ ಅರ್ಥದಲ್ಲಿ ಅಲ್ಲ. ಸೈದ್ಧಾಂತಿಕ ರಾಜಕಾರಣಕ್ಕೆ ನಂಬಿಕೆ ಇಟ್ಟವರಾಗಿ ಜಾರಕಿಹೊಳಿ ಅವರನ್ನು ಉದಾಹರಣೆಯಾಗಿ ಹೇಳಿದ್ದೇನೆ. ಯಾವುದೇ ನಾಯಕತ್ವ ಬದಲಾವಣೆಯ ಪ್ರಶ್ನೆ ಪಕ್ಷದೊಳಗೆ ನಡೆದಿಲ್ಲ,” ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು,
“ಯತೀಂದ್ರ ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಮುಂದಿನ ಸಿಎಂ ಯಾರು ಎಂಬುದರ ಬಗ್ಗೆ ಚರ್ಚೆ ಮಾಡುವ ಅಗತ್ಯವೇ ಇಲ್ಲ. ಪಾರ್ಟಿ ಏನು ಹೇಳುತ್ತದೋ ಅದಕ್ಕೆ ಬದ್ದವಾಗಿಯೇ ನಾವು ಕೆಲಸ ಮಾಡುತ್ತೇವೆ,” ಎಂದು ಪ್ರತಿಕ್ರಿಯಿಸಿದರು.
ಈ ನಡುವೆ ದೆಹಲಿ ವಿಶೇಷ ಪ್ರತಿನಿಧಿ ಟಿ.ವಿ. ಜಯಚಂದ್ರ ಅವರು “ನವೆಂಬರ್ 20ರ ಬಳಿಕ ಕ್ಯಾಬಿನೆಟ್ಗೆ ಹೊಸ ಸ್ವರೂಪ ಸಿಗಬಹುದು” ಎಂದು ಹೇಳಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
“ಎರಡು ವರ್ಷ ಪೂರೈಸಿದ ನಂತರ ಹೈಕಮಾಂಡ್ ಹೊಸ ಬದಲಾವಣೆಗಳ ಬಗ್ಗೆ ಚಿಂತಿಸಬಹುದು,” ಎಂದು ಜಯಚಂದ್ರ ಹೇಳಿದ್ದಾರೆ.
ಒಟ್ಟಿನಲ್ಲಿ, “ನವೆಂಬರ್ ಕ್ರಾಂತಿ” ಕುರಿತ ಊಹಾಪೋಹಗಳು ಬಿರುಸು ಪಡೆಯುತ್ತಿರುವ ಸಂದರ್ಭದಲ್ಲೇ, ಯತೀಂದ್ರ ಸಿದ್ದರಾಮಯ್ಯ ಉರುಳಿಸಿದ ಉತ್ತರಾಧಿಕಾರಿ ಬಾಂಬ್ ಕಾಂಗ್ರೆಸ್ ಪಾಳೆಯಲ್ಲಿ ಹೊಸ ರಾಜಕೀಯ ತಾಪಮಾನವನ್ನು ಸೃಷ್ಟಿಸಿದೆ.
