ಬೆಳಗಾವಿ: ರೈಬಾಗ್ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಕೇವಲ ₹5,000 ಸಾಲಕ್ಕಾಗಿ 22 ವರ್ಷದ ಯುವಕನೊಬ್ಬನನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದಿರುವ ಘಟನೆ ನಾಡನ್ನೆ ಬೆಚ್ಚಿ ಬೀಳಿಸಿದೆ. ಮಾರುತಿ ಎಂಬ ಯುವಕನು ಮಾರಕಾಸ್ತ್ರಗಳಿಂದ ಕೊಚ್ಚಲ್ಪಟ್ಟು, ನಂತರ ಕಾರು ಹರಿಸಿ ಬರ್ಬರವಾಗಿ ಕೊಲೆಯಾಗಿದ್ದಾನೆ.
ಮಾರುತಿ ತನ್ನದೇ ಆದ ಯೂಟ್ಯೂಬ್ ಚಾನೆಲ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಹಾಡುಗಳನ್ನು ಹಾಡುತ್ತಿದ್ದ ಪ್ರತಿಭಾವಂತ ಯುವಕ. ಆತ ಈರಪ್ಪ ಎಂಬಾತರಿಂದ ಕಬ್ಬಿನ ಗ್ಯಾಂಗ್ ಕೆಲಸಕ್ಕಾಗಿ ₹50,000ಅಡ್ವಾನ್ಸ್ ಪಡೆದಿದ್ದ. ಬಳಿಕ ₹45,000 ಹಿಂತಿರುಗಿಸಿದ್ದರೂ, ಉಳಿದ ₹5,000 ನೀಡದಿದ್ದ ಕಾರಣ ಈರಪ್ಪ ಹಾಗೂ ಅವನ ಗುಂಪು ಮಾರುತಿಗೆ ಹತ್ಯೆಯ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ಘಟನೆಯ ದಿನ ಮಾರುತಿಯನ್ನು ಪಕ್ಕದಿಂದ ಹೊಂಚು ಹಾಕಿ ಮೊದಲು ಮಾರಕಾಸ್ತ್ರಗಳಿಂದ ಗಂಭೀರವಾಗಿ ಗಾಯಗೊಳಿಸಿದರು. ನಂತರ, ಆತನ ದೇಹದ ಮೇಲೆ ಕಾರನ್ನು ಹತ್ತಿಸಿ ಭೀಕರ ಹತ್ಯೆಗೈದಿದ್ದಾರೆ. ಕಾರು ಪಲ್ಟಿಯಾಗಿ ಕೆಲ ಆರೋಪಿಗಳಿಗೂ ಗಾಯವಾಗಿದೆ.
ಪೊಲೀಸರು ಈಗಾಗಲೇ ಈ ಘಟನೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಿದ್ದಾರೆ. ಗಾಯಗೊಂಡಿರುವ ಆರೋಪಿಗಳನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರುತಿಯ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲೂ ಕಂಬನಿ ಮೇಳವಾಗಿದೆ.
ಘಟನೆಯ ತನಿಖೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ಹೊರಬರಲಿದೆ ಎಂದು ರೈಬಾಗ್ ಪೊಲೀಸರು ತಿಳಿಸಿದ್ದಾರೆ.