ಬೆಂಗಳೂರು, ಮಾರ್ಚ್ 18: ಯುಗಾದಿ ಹಬ್ಬಕ್ಕೆ ಇನ್ನೊಂದು ದಿನ ಬಾಕಿ ಇರುವಾಗಲೇ ನಗರದಾದ್ಯಂತ ಹಬ್ಬದ ಖರೀದಿ ಭರಾಟೆ ಜೋರಾಗಿದ್ದು, ವಿಶೇಷವಾಗಿ KR Market ನಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಜನಸಂದಣಿ ಹೆಚ್ಚಾಗಿದೆ.
ನಗರದ ವಿವಿಧ ಭಾಗಗಳಿಂದ ಜನರು ಹೂವು, ಹಣ್ಣು, ಬೇವಿನ ಸೊಪ್ಪು ಹಾಗೂ ಮಾವಿನ ಸೊಪ್ಪು ಸೇರಿದಂತೆ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹರಿದುಬಂದಿದ್ದಾರೆ. ನಾಳೆ ಹಬ್ಬದ ದಿನ ಬೆಲೆ ಇನ್ನಷ್ಟು ಏರಿಕೆ ಆಗಬಹುದು ಎಂಬ ನಿರೀಕ್ಷೆಯಿಂದಾಗಿ ಇಂದೇ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಗೆ ಮುಂದಾಗಿದ್ದಾರೆ.
ಹೂವಿನ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಮಲ್ಲಿಗೆ ಹೂವು ಮೊದಲು ₹700–₹800 ಇದ್ದದ್ದು ಇದೀಗ ₹1000ರಿಂದ ₹1200ರವರೆಗೆ ಏರಿಕೆಯಾಗಿದೆ. ಸೇವಂತಿಗೆ ಹೂವು ₹100 ಇದ್ದದ್ದು ₹250ರವರೆಗೆ ತಲುಪಿದೆ.
ಹಬ್ಬಕ್ಕೆ ಪ್ರಮುಖವಾಗಿರುವ ಬೇವಿನ ಸೊಪ್ಪು ಹಾಗೂ ಮಾವಿನ ಸೊಪ್ಪುಗಳ ಬೇಡಿಕೆ ಹೆಚ್ಚಾಗಿದ್ದು, ಬೇವಿನ ಸೊಪ್ಪಿನ ಒಂದು ಕಟ್ಟು ₹20 ಹಾಗೂ ಮಾವಿನ ಸೊಪ್ಪಿನ ಒಂದು ಕಟ್ಟು ₹25ಕ್ಕೆ ಮಾರಾಟವಾಗುತ್ತಿದೆ.
ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ. ಕರ್ಬೂಜ ₹100, ಬಾಳೆಹಣ್ಣು ₹50, ದ್ರಾಕ್ಷಿ ₹120 ಹಾಗೂ ದಾಳಿಂಬೆ ₹220ರವರೆಗೆ ಮಾರಾಟವಾಗುತ್ತಿದೆ. ಹೂವಿನ ಹಾರಗಳ ಬೆಲೆಯೂ ಏರಿಕೆಯಾಗಿದೆ.
ಬೆಲೆ ಏರಿಕೆ ಇದ್ದರೂ ಸಹ, ನಾಳೆ ಇನ್ನಷ್ಟು ಹೆಚ್ಚಾಗುವ ಭೀತಿಯಿಂದಾಗಿ ಜನರು ಇಂದೇ ಮಾರುಕಟ್ಟೆಗಳಿಗೆ ಮುಗಿಬಿದ್ದು ಖರೀದಿ ನಡೆಸುತ್ತಿರುವುದು ಕಂಡುಬರುತ್ತಿದೆ.
ಬೆಂಗಳೂರು ನಗರದ ಇತರೆ ಮಾರುಕಟ್ಟೆಗಳಲ್ಲಿಯೂ ಇದೇ ರೀತಿಯ ದೃಶ್ಯ ಕಂಡುಬರುತ್ತಿದ್ದು, ಯುಗಾದಿ ಹಬ್ಬದ ಸಂಭ್ರಮಕ್ಕೆ ನಗರ ಸಜ್ಜಾಗಿದೆ.
