ಬೆಂಗಳೂರು: ಮಂಡ್ಯದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರಿನಲ್ಲಿ ಅಬಕಾರಿ ಉಪ ಆಯುಕ್ತರನ್ನಾಗಿ ನಿಯೋಜಿಸಲು ಸಿಎಂ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಶುಕ್ರವಾರ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸರಕಾರಕ್ಕೆ ಕಳಂಕ ತರುವ ದುರುದ್ದೇಶದಿಂದ ಈ ಕೃತ್ಯವೆಸಗಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಕಲಂ 336(3) ಮತ್ತು 336(4) ಮತ್ತು ಫೋರ್ಜರಿ ಮತ್ತು ಸೆಕ್ಷನ್ 340(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಮಂಡ್ಯ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಕೆ.ಮೋಹನ್ ಅವರನ್ನು ಮೈಸೂರು ಅಬಕಾರಿ ಉಪ ಆಯುಕ್ತರಾಗಿ ನಿಯೋಜಿಸುವ ಕುರಿತು ಟಿಪ್ಪಣಿಯು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಲಾಗಿದೆ ಎಂದು ಸಿಎಂ ಜಂಟಿ ಕಾರ್ಯದರ್ಶಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಧಿಕೃತ ಸಂಖ್ಯೆ ಮತ್ತು ದಿನಾಂಕವಿಲ್ಲದ ಈ ಟಿಪ್ಪಣಿಯು ಮುಖ್ಯಮಂತ್ರಿಯವರ ಸಚಿವಾಲಯದ ಇ – ತಂತ್ರಾಂಶ(E-Office)ದಲ್ಲಿ ನೋಂದಾಯಿಸಿರುವುದಿಲ್ಲ ಹಾಗೂ ಟಿಪ್ಪಣಿಯನ್ನು ಯಾವುದೇ ಇಲಾಖೆಗೆ ರವಾನಿಸಿರುವುದಿಲ್ಲ. ಇದರ ಆಧಾರದಲ್ಲಿ ಯಾವುದೇ ವರ್ಗಾವಣೆ/ನಿಯೋಜನೆ ಆದೇಶ ಸಹ ಹೊರಡಿಸಿರುವುದಿಲ್ಲ. ಆದಾಗ್ಯೂ ಮುಖ್ಯಮಂತ್ರಿಯವರಿಗೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರನ್ನು ತರುವ ದುರುದ್ದೇಶದಿಂದ ಈ ತರಹದ ಕೃತ್ಯವನ್ನು ಎಸಗಿರುವುದು ಕಂಡುಬಂದಿರುವುದರಿಂದ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ತುರ್ತಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಇದಕ್ಕೂ ಮುನ್ನಾ ಬಿಜೆಪಿಯ ಹಿರಿಯ ಶಾಸಕ ಸುನೀಲ್ ಕುಮಾರ್, ಪತ್ರವನ್ನು ಪೋಸ್ಟ್ ಮಾಡಿ, ಸಿಎಂ ಸಿದ್ದರಾಮಯ್ಯನವರ ಹಳಿ ತಪ್ಪಿದ ಆಡಳಿತದ ಕ್ಲಾಸಿಕ್ ಉದಾಹರಣೆ ಎಂದಿದ್ದರು.
ಸಿಎಂ @siddaramaiah ನವರ ಹಳಿ ತಪ್ಪಿದ ಆಡಳಿತದ ಕ್ಲಾಸಿಕ್ ಉದಾಹರಣೆ.
ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಖುದ್ದು ಮುಖ್ಯಮಂತ್ರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ನಿರ್ದೇಶನ ನೀಡಿದ್ದಾರೆ.
1/4 pic.twitter.com/AeTt1KMUMF— Sunil Kumar Karkala (@karkalasunil) February 13, 2026
