ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಅವರು, ಹೆಚ್ಚಿನ ಯಂತ್ರೋಪಕರಣಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ಎಲ್ಲಾ ಕಾಮಗಾರಿಗಳನ್ನು ಸಮಾನಾಂತರವಾಗಿ ಏಕಕಾಲದಲ್ಲಿ ಕೈಗೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಸೆಂಟ್ ಜಾನ್ಸ್ ಬಳಿ ಪಿಲ್ಲರ್ ಅಳವಡಿಕೆಗೆ ಎದುರಾಗಿದ್ದ ತೊಡಕು ನಿವಾರಣೆಯಾಗಿ ಪೈಲಿಂಗ್ ಕೆಲಸ ಪ್ರಾರಂಭವಾಗಿದ್ದು, 15 ದಿನಗಳೊಳಗೆ ಪೈಲಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದರು. ಪೈಲಿಂಗ್ ಜೊತೆಗೆ ಪೈಲ್ ಕ್ಯಾಪ್ ಹಾಗೂ ಪಿಲ್ಲರ್ ನಿರ್ಮಾಣ, ಸೂಪರ್ ಸ್ಟ್ರಕ್ಚರ್ ಸೆಗ್ಮೆಂಟ್ ಕಾಸ್ಟಿಂಗ್ ಕೆಲಸಗಳನ್ನು ಸಮಾನಾಂತರವಾಗಿ ನಡೆಸಿ ಕಾಮಗಾರಿಗೆ ವೇಗ ನೀಡುವಂತೆ ಸೂಚನೆ ನೀಡಿದರು.
ಕಾಮಗಾರಿಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ದಿನದ 24 ಗಂಟೆಗಳ ಕಾಲ ಕೆಲಸ ಮಾಡಿ ನಿಗದಿತ ಅವಧಿಯೊಳಗೆ ಮೇಲ್ಸೇತುವೆ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.

ಮಡಿವಾಳ ಭಾಗದ ಡೌನ್ ರ್ಯಾಂಪ್ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಸೂಚಿಸಿ, ಸಂಚಾರಿ ಪೊಲೀಸ್ ಇಲಾಖೆಯಿಂದ ಭಾಗಶಃ ರಸ್ತೆ ನಿರ್ಬಂಧಕ್ಕೆ ಅನುಮತಿ ಪಡೆದು ಮಳೆನೀರು ಹರಿವು ಪೈಪ್ಲೈನ್ ಕಾಮಗಾರಿಯನ್ನು ಕೈಗೊಳ್ಳುವಂತೆ ನಿರ್ದೇಶಿಸಿದರು. ಜೊತೆಗೆ ಕೇಂದ್ರೀಯ ಸದನ ಹಾಗೂ ಆಸ್ಟ್ರೋ ಫಿಜಿಕ್ಸ್ ಜಾಗವನ್ನು ವಶಪಡಿಸಿಕೊಂಡು ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈಜೀಪುರ ಸಿಗ್ನಲ್ ಹತ್ತಿರದ ರ್ಯಾಂಪ್ ಕಾಮಗಾರಿಗೂ ವೇಗ ನೀಡಲು ಆದೇಶಿಸಿದರು.
ಗ್ರೇಡ್ ಮಟ್ಟದ ರಸ್ತೆಯಲ್ಲಿ ಕಂಡುಬಂದಿರುವ ರಸ್ತೆ ಗುಂಡಿಗಳನ್ನು ತಕ್ಷಣ ಮುಚ್ಚಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಪರಿಶೀಲನೆ ವೇಳೆ ನಗರ ಪಾಲಿಕೆ ಆಯುಕ್ತ ರಮೇಶ್ ಕೆ.ಎನ್., ಮುಖ್ಯ ಅಭಿಯಂತರ ರವಿ, ಡಾ. ರಾಘವೇಂದ್ರ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಹೊಸ ವೇಗ ಸಿಗುವ ನಿರೀಕ್ಷೆಯಿದೆ.
