ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್ನ ಹಳ್ಳಿಯೊಂದರಲ್ಲಿ ಹಣದ ವಿಚಾರವಾಗಿ ಆರಂಭವಾದ ಜಗಳದಲ್ಲಿ ವ್ಯಕ್ತಿಯೊಬ್ಬ ತನ್ನ ಅಪ್ಪ, ಅಮ್ಮ, ಅಜ್ಜಿ ಮತ್ತು ಸಹೋದರಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬಸಂತ್ಪುರ ರುಡಾಲ್ ಗ್ರಾಮದ ರಾಮಗಾಂವ್ ಹಳ್ಳಿಯಲ್ಲಿ ಭಾನುವಾರ ಮಧ್ಯರಾತ್ರಿ ಈ ಘೋರ ಘಟನೆ ನಡೆದಿದೆ.
ಆರೋಪಿ ತನ್ನ ಅಣ್ಣನ ಮೇಲೆಯೂ ಹಲ್ಲೆ ನಡೆಸಿದ್ದು, ಬಳಿಕ ಇಟ್ಟಿಗೆಯಿಂದ ತಾನೂ ಹೊಡೆದುಕೊಂಡಿದ್ದಾನೆ.
ಆರೋಪಿ ನಿರಂಕರ್(30), ಭೂಮಿ ಮತ್ತು ಆಭರಣಗಳ ಮಾರಾಟದಿಂದ ಬಂದ ಹಣಕ್ಕಾಗಿ ತನ್ನ ತಂದೆಯೊಂದಿಗೆ ಜಗಳ ಮಾಡಿದ್ದು, ಈ ಜಗಳ ನಾಲ್ವರ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ(ಗ್ರಾಮೀಣ) ದುರ್ಗಾ ಪ್ರಸಾದ್ ತಿವಾರಿ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಈ ಸಂಬಂಧ ಆರೋಪಿಯ ಅಣ್ಣ ಗುರುದೇವ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ನಿರಂಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.
ಕೋಪದ ಭರದಲ್ಲಿ, ಆರೋಪಿ ಕುಟುಂಬ ಸದಸ್ಯರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ, ಇದರಿಂದಾಗಿ ಅವರ ಪೋಷಕರು, ಅಜ್ಜಿ ಮತ್ತು ಸಹೋದರಿಗೆ ಗಂಭೀರ ಗಾಯಗಳಾಗಿದ್ದವು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತರನ್ನು ಬದ್ಲು ರಾಮ್ (60), ಅವರ ಪತ್ನಿ ಸಂಜು ದೇವಿ (56), ಅವರ ಮಗಳು ಪಾರ್ವತಿ(ಸುಮಾರು 42) ಮತ್ತು ಅಜ್ಜಿ ಸಿತಾಲಾ (80) ಎಂದು ಗುರುತಿಸಲಾಗಿದೆ.
ಕೊಲೆ ಮಾಡುವ ಉದ್ದೇಶದಿಂದ ಆರೋಪಿಯು ಕೊಡಲಿಯಿಂದ ಹೊಡೆದಿದ್ದಾನೆ ಎಂದು ಗುರುದೇವ್ ಹೇಳಿದ್ದಾರೆ.
ಘಟನೆಯ ಸಮಯದಲ್ಲಿ, ಆರೋಪಿಯು ಇಟ್ಟಿಗೆಯಿಂದ ಹಲವು ಬಾರಿ ಹೊಡೆದುಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.
ಪೊಲೀಸರು ಆರೋಪಿಯನ್ನು ಸ್ಥಳದಿಂದ ವಶಕ್ಕೆ ಪಡೆದು, ಬಹ್ರೈಚ್ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸ್ಥಿತಿ ಸಹ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಲಖನೌಗೆ ಕಳುಹಿಸಲಾಗಿದೆ.
