ಕಡಬ, ಡಿ.27. ಒಕ್ಕಲಿಗ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದೇ ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಮುಳುವಾಯಿತು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಕಡಬದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದವರೊಂದಿಗೆ ಪಕ್ಷದ ನಾಯಕರ ವಿರುದ್ಧ ತನ್ನ ಅಸಮಾಧಾನ ಹೊರಹಾಕಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಒಕ್ಕಲಿಗ ಮುಖಂಡರು ಹಾಗೂ ನಾನು ಸೇರಿಕೊಂಡು ಭೈರವೈಕ್ಯ ಆದಿಚುಂಚನಗಿರಿ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಯವರ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಅಲ್ಲಿ ನಾನು ಒಕ್ಕಲಿಗ ಸಮಾಜದಲ್ಲಿ ಹುಟ್ಟಿ ಆದಿಚುಂಚನಗಿರಿ ಸ್ವಾಮೀಜಿಯವರ ಆಶೀರ್ವಾದ ಪಡೆದು ರಾಜ್ಯದ ಮುಖ್ಯ ಮಂತ್ರಿಯಾದೆ ಎಂದು ಹೇಳಿದ್ದು ನನ್ನ ಸ್ಥಾನಕ್ಕೆ ಮುಳುವಾಯಿತು ಎಂದರು.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದ ಅಂದಿನ ರಾಜ್ಯ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ ಸದಾನಂದ ಗೌಡ, ನಾನು ಚುನಾವಣೆ ರಾಜಕೀಯ ದಿಂದ ನಿವೃತ್ತನಾಗಿದ್ದು, ಇನ್ನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ ಆದ್ದರಿಂದ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯನಾಗಿರುತ್ತೇನೆ ಎಂದರು.
ಇಂದು ಪ್ರಾಮಾಣಿಕ ರಾಜಕಾರಣಕ್ಕೆ ಬೆಲೆ ಇಲ್ಲ ಹರಕು ನಾಲಗೆ, ಚೀಲ ತುಂಬಾ ದುಡ್ಡು ಮತ್ತು ಗುಂಪುಗಾರಿಕೆಯಿಂದಲೇ ರಾಜಕೀಯ ನಡೆಯುತ್ತಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಬೇಕೇ ಬೇಕು. ಉಳಿದ ಪಕ್ಷಗಳಿಗಿಂತ ನನ್ನ ಪಕ್ಷ ಒಳ್ಳೆಯದು ಎನ್ನುವ ನೆಲೆಯಲ್ಲಿ ಪಕ್ಷದ ಕೆಲಸ ಮಾಡುತ್ತೇನೆ ಎಂದರು.
