ಕರ್ತವ್ಯನಿರತ ಪೊಲೀಸರು ಮದ್ಯಪಾನ ಮಾಡಿ ಸಾರ್ವಜನಿಕರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ದುರ್ನಡತೆ ತೋರಿದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಶುಕ್ರವಾರ ಅಮಾನತು ಮಾಡಿದ್ದಾರೆ. ಬೆಂಗಳೂರು: ಕರ್ತವ್ಯನಿರತ ಪೊಲೀಸರು ಮದ್ಯಪಾನ ಮಾಡಿ ಸಾರ್ವಜನಿಕರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ದುರ್ನಡತೆ ತೋರಿದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಶುಕ್ರವಾರ ಅಮಾನತು ಮಾಡಿದ್ದಾರೆ.
ಮಾಗಡಿ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್ ಕೆ.ಎನ್, ಚನ್ನಪಟ್ಟಣ ಪುರ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೆಬಲ್ ನಾರಾಯಣ ಮೂರ್ತಿ ಹಾಗೂ ಡಿಸಿಆರ್ಬಿ ಘಟಕದ ಎಎಸ್ಐ ಗೋವಿಂದಯ್ಯ ಜಿ.ಎಸ್ ಅಮಾನತುಗೊಂಡವರು. ಈ ಮೂವರೂ ಸಂಬಂಧಿಕರಾಗಿದ್ದಾರೆಂದು ತಿಳಿದುಬಂದಿದೆ.
ನಾಲ್ಕೈದು ತಿಂಗಳಿಂದ ಕರ್ತವ್ಯಕ್ಕೆ ಗೈರಾಗಿದ್ದ ಮಂಜುನಾಥ್ ಮತ್ತು ನಾರಾಯಣಮೂರ್ತಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದಕ್ಕಾಗಿ, ಎಸ್ಪಿ ಕಚೇರಿಗೆ ಗುರುವಾರ ಮಧ್ಯಾಹ್ನ ತೆರಳಿದ್ದರು. ಆದರೆ, ವರದಿ ಮಾಡಿಕೊಳ್ಳದೆ ಕಚೇರಿಯಲ್ಲಿದ್ದ ಗೋವಿಂದಯ್ಯ ಅವರನ್ನು ತಮ್ಮೊಂದಿಗೆ ಕರೆದೊಯ್ದು, ಮದ್ಯದ ಪಾರ್ಟಿ ಮಾಡಿದ್ದಾರೆ.
ಕಂಠಪೂರ್ತಿ ಕುಡಿದ ಮೂವರು ಮಾಗಡಿ ಕಡೆಗೆ ತೆರಳುವಾಗ, ಮಾರ್ಗಮಧ್ಯೆ ಸಾರ್ವಜನಿಕರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ದುರ್ನಡತೆ ತೋರಿದ್ದಾರೆ. ಈ ವೇಳೆ ಕೆಲವರು ಕಾರನ್ನು ಹಿಂಬಾಲಿಸಿಕೊಂಡು ಬಂದು ಅಡ್ಡ ಹಾಕಿ, ಮೂವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ಪೊಲೀಸರ ದುರ್ನಡತೆ ಕುರಿತು ವಿಡಿಯೋವನ್ನು ಮಾಡಿ, ವಿಡಿಯೋ ಸಹಿತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಎಎಸ್ಐ ಮಂಜುನಾಥ್ ಅರೆನಗ್ನರಾಗಿದ್ದು, ಇನ್ನಿಬ್ಬರು ತಮ್ಮ ಸಮವಸ್ತ್ರ ಕಳಚಿ ಕಾರಿನಲ್ಲಿ ನೇತು ಹಾಕಿರುವುದು ಕಂಡು ಬಂದಿದೆ.
ಘಟನೆ ಸಂಬಂಧ ಪ್ರಾಥಮಿಕ ವಿಚಾರಣೆ ನಡಸಿದ ಎಸ್ಪಿ ಇದೀಗ ಮೂವರನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
