ಬೆಂಗಳೂರು: ಕಾಂಗ್ರೆಸ್ ಗೆ ಭಾರಿ ಹಿನ್ನೆಡೆಯುಂಟಾಗುವ ಆದೇಶವೊಂದು ಹೈಕೋರ್ಟ್ ನಿಂದ ಹೊರಬಿದ್ದಿದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಪ್ರಕಟಿಸಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದ ಬಿಜೆಪಿಯ ಅಭ್ಯರ್ಥಿ ಸಿಮುನಿರಾಜು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಪೀಠ, ಚುನಾವಣಾ ಅಕ್ರಮಗಳ ಹಿನ್ನೆಲೆಯಲ್ಲಿ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಆದೇಶ ನೀಡಿದೆ. ಅಸಿಂಧುಗೊಳಿಸಿದ ಆದೇಶವನ್ನು ಚುನಾವಣಾ ಆಯೋಗಕ್ಕೆ ರವಾನೆ ಮಾಡಲು ಹೈಕೋರ್ಟ್ ಆದೇಶಿಸಿದೆ. ವಿಧಾನಸಭೆ ಕಾರ್ಯದರ್ಶಿಗೂ ಕಳುಹಿಸಲು ಹೈಕೋರ್ಟ್ ಆದೇಶ ನೀಡಿದೆ.
ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಗೆ ತಡೆಯಾಜ್ಞೆ ಕೋರಿ ಮೇಲ್ಮನವಿ ಸಲ್ಲಿಸಲು ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಅವಕಾಶ ಇದೆ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ 6 ತಿಂಗಳೊಳಗಾಗಿ ತಡೆಯಾಜ್ಞೆ ನೀಡದಿದ್ದರೇ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆಸಬೇಕಾಗುತ್ತೆ.
