ಗದಗ: ಆ್ಯಂಬುಲೆನ್ಸ್ ಎಂದರೆ ಜೀವ ಉಳಿಸುವ ತುರ್ತು ಸೇವೆಯ ವಾಹನ. ಅಪಘಾತ, ಅನಾರೋಗ್ಯ ಅಥವಾ ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸಲೆಂದೇ ಆ್ಯಂಬುಲೆನ್ಸ್ ವಾಹನಗಳನ್ನು ಆಸ್ಪತ್ರೆಗಳಲ್ಲಿ ಮೀಸಲಿಡಲಾಗಿರುತ್ತದೆ. ಆದರೆ, ಈ ವಾಹನವನ್ನು ಸಾಮಾನ್ಯ ಪ್ರಯಾಣಿಕರ ವಾಹನವಾಗಿ ಬಳಸಲಾಗುತ್ತಿದೆ ಎಂಬ ಆರೋಪವೊಂದು ಕೇಳಿ ಬಂದಿದೆ.
ಗದಗ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಕೆಎಚ್ ಪಾಟೀಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಕೆಎಚ್ಪಿಐಎಂಎಸ್) ಆಸ್ಪತ್ರೆ ಬಳಿ ಪ್ರಯಾಣಿಕರನ್ನು ಸಾಗಿಸಲು ಆ್ಯಂಬುಲೆನ್ಸ್ ಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವೀಡಿಯೋವೊಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ಕೆಲವು ಮಂದಿ ಆ್ಯಂಬುಲೆನ್ಸ್ ಬಳಿ ಓಡಿ ಹೋಗಿ ಹತ್ತುತ್ತಿರುವುದು ಕಂಡುಬಂದಿದೆ.
ಆದರೆ ಸಂಸ್ಥೆಯು ಈ ಆರೋಪವನ್ನು ತಳ್ಳಿಹಾಕಿದೆ. ಒಬ್ಬ ಚಾಲಕನಿಂದ ತಪ್ಪಾಗಿರಬಹುದು. ಈ ಬಗ್ಗೆ ಸಂಸ್ಥೆಯ ನಿರ್ದೇಶಕರಿಗೆ ದೂರು ಬಂದಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಹೇಳಿದೆ.
ಗದಗದಲ್ಲಿ ತುರ್ತು ಸೇವೆಗೆ ಬಳಕೆಯಾಗಬೇಕಾದ ಸರ್ಕಾರಿ ಜಿಲ್ಲಾ ಆಸ್ಪತ್ರೆಯ (GIMS) ಆಂಬ್ಯುಲೆನ್ಸ್ ಈಗ ಪ್ರಯಾಣಿಕರನ್ನು ಸಾಗಿಸುವ ಖಾಸಗಿ ವಾಹನವಾಗಿ ಬಳಕೆಯಾಗುತ್ತಿದೆ.
ರೋಗಿಗಳ ಬದಲಿಗೆ ದಾರಿಯುದ್ದಕ್ಕೂ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ… pic.twitter.com/VoJq3VvIdK
— kannadaprabha (@KannadaPrabha) March 10, 2026
ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಅವರು ಮಾತನಾಡಿ, ನಾವು ವಿಡಿಯೋ ನೋಡಿದ್ದೇವೆ. ಆ್ಯಂಬುಲೆನ್ಸ್ ಕೆಎಚ್ಪಿಐಎಂಎಸ್ಗೆ ಸೇರಿದ್ದಲ್ಲ. ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಜಿಲ್ಲಾ ಆರೋಗ್ಯ ಅಧಿಕಾರಿಯೂ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವ್ಯಕ್ತಿಯೊಬ್ಬರು ವಿಡಿಯೋ ರೆಕಾರ್ಡ್ ಮಾಡುವಾಗ ಬಸ್ ನಿಲ್ದಾಣದಲ್ಲಿದ್ದ ಈರಣ್ಣ ದೋಟಿಹಾಳ್ ಎಂಬ ವ್ಯಕ್ತಿ ಮಾತನಾಡಿ, “ನಾವು ಗದಗ-ಲಕ್ಷ್ಮಿೇಶ್ವರ ರಸ್ತೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಬಸ್ಗಾಗಿ ಕಾಯುತ್ತಿದ್ದೆವು. ಈ ವೇಳೆ ಕೆಎಚ್ಪಿಐಎಂಎಸ್ ಕ್ಯಾಂಪಸ್ನಿಂದ ಆ್ಯಂಬುಲೆನ್ಸ್ ಹೊರಬಂದು ಬಸ್ ನಿಲ್ದಾಣದಿಂದ ಸುಮಾರು 100 ಮೀಟರ್ ದೂರದಲ್ಲಿ ನಿಂತಿತು. ಅನೇಕ ಜನರು ಆ್ಯಂಬುಲೆನ್ಸ್ ಕಡೆಗೆ ಓಡಿ ಅದನ್ನು ಹತ್ತಿದರು. ಚಾಲಕ ಜನರಿಂದ ಬಸ್ ದರದಷ್ಟೇ ಹಣ ವಸೂಲಿ ಮಾಡುತ್ತಿದ್ದ ಎಂದು ಹೇಳಿದ್ದಾರೆ.
ಈ ನಡುವೆ ಸಂಸ್ಥೆಯ ಅಧಿಕಾರಿಯೊಬ್ಬರು ಮಾತನಾಡಿ, ಆ್ಯಂಬುಲೆನ್ಸ್ ಚಾಲಕರು ಅತ್ಯಂತ ಜವಾಬ್ದಾರಿಯ ಸ್ಥಾನದಲ್ಲಿರುತ್ತಾರೆ. ತುರ್ತು ಸಂದರ್ಭದಲ್ಲೇ ಮಾತ್ರ ಅಂಬುಲೆನ್ಸ್ ಬಳಸಬೇಕು. ಅಗತ್ಯವಿಲ್ಲದೆ ಜನರನ್ನು ಒಳಗೆ ಬಿಡಬಾರದು ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಇಂತಹ ಆರೋಪಗಳು ಕೇಳಿಬಂದಿದ್ದರೂ ಸಾಕ್ಷ್ಯಾಧಾರ ಇಲ್ಲದ ಕಾರಣ ಅಧಿಕಾರಿಗಳು ಇದನ್ನುಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹರಿದಾಡುತ್ತಿರುವುದರಿಂದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ತುರ್ತು ಸೇವೆಯ ವಾಹನಗಳು ಯಾವಾಗ ಬೇಕಾದರೂ ಜೀವ ಉಳಿಸಲು ಸಿದ್ಧವಾಗಿರಬೇಕು. ಆದರೆ ಅವುಗಳನ್ನು ಸಾಮಾನ್ಯ ಪ್ರಯಾಣಕ್ಕೆ ಬಳಸಿದರೆ ತುರ್ತು ಸಂದರ್ಭದಲ್ಲಿ ಸೇವೆ ದೊರೆಯದ ಪರಿಸ್ಥಿತಿ ಉಂಟಾಗಬಹುದು. ಆರೋಗ್ಯ ಕ್ಷೇತ್ರದ ನಿಯಮಾವಳಿಗಳ ಪ್ರಕಾರ ಅಂಬುಲೆನ್ಸ್ಗಳನ್ನು ಕೇವಲ ರೋಗಿಗಳ ತುರ್ತು ಸಾಗಣೆಗೆ ಮಾತ್ರ ಬಳಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
