ಬೆಂಗಳೂರು : ರಾಜ್ಯ ಬಿಜೆಪಿಯ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮುಸ್ಲಿಂ ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಬಿಜೆಪಿ ಕರ್ನಾಟಕದ ಎಕ್ಸ್ ಖಾತೆಯಲ್ಲಿ ‘ಎಚ್ಚರ..ಎಚ್ಚರ..ಎಚ್ಚರ’ ಎಂಬ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿತ್ತು. ಆ ವಿಡಿಯೋದಲ್ಲಿ ಎಸ್ಸಿ, ಎಸ್ಟಿ ಮತ್ತು ಓಬಿಸಿ ವರ್ಗಗಳನ್ನು ಮೊಟ್ಟೆಗಳೆಂದು ಬಿಂಬಿಸಿ, ಆ ಮೊಟ್ಟೆಗಳಿರುವ ಬ್ಯಾಸ್ಕೆಟ್ಗೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಮುಸ್ಲಿಂ ಎಂಬ ಮೊಟ್ಟೆಯನ್ನು ತಂದಿಟ್ಟಿದ್ದಾರೆ.
ಆ ಮೊಟ್ಟೆಯು ಮರಿಯಾದ ನಂತರ ಎಸ್ಸಿ, ಎಸ್ಟಿ ಮತ್ತು ಓಬಿಸಿ ವರ್ಗಗಳೆಂದು ಬಿಂಬಿಸುವ ಮೊಟ್ಟೆಯಿಂದ ಬಂದ ಮರಿಗಳಿಗೆ ಸೇರಬೇಕಾದ ಅನುದಾನವನ್ನು ಮುಸ್ಲಿಂ ಸಮುದಾಯದವೆಂದು ಬಿಂಬಿಸುವ ಮೊಟ್ಟೆಯಿಂದ ಬಂದ ಮರಿಯ ಬಾಯಿಗೆ ತಿನಿಸುವಂತೆ ಅನಿಮೇಶನ್ ಮಾಡಲಾಗಿತ್ತು.
ಆನಂತರ, ಮುಸ್ಲಿಂ ಸಮುದಾಯದ ಹೋಲುವ ಪಕ್ಷಿ ಎಸ್ಸಿ, ಎಸ್ಟಿ ಮತ್ತು ಓಬಿಸಿ ವರ್ಗಗಳನ್ನು ಗೂಡಿನಿಂದ ಒದ್ದು ಓಡಿಸುವಂತೆ ಸಮುದಾಯಗಳ ಮಧ್ಯೆ ದ್ವೇಷ ಕೆರಳಿಸುವ ರೀತಿಯಲ್ಲಿ ಪೋಸ್ಟ್ ಮಾಡಿದ್ದು, ಇವರುಗಳ ವಿರುದ್ಧ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿತ್ತು.
ಈ ಬಗ್ಗೆ ಕೆಪಿಸಿಸಿಯ ಕಾನೂನು ಘಟಕದ ರಮೇಶ್ ಬಾಬು ಎಂಬುವವರು ‘ಜೆಪಿ ನಡ್ಡಾ, ವಿಜಯೇಂದ್ರ ಸೂಚನೆಯಂತೆ ಬಿಜೆಪಿಯ ಅಧಿಕೃತ ಖಾತೆಯಲ್ಲಿ ಅಮಿತ್ ಮಾಳವಿಯಾ ಅವರು ಪೋಸ್ಟ್ ಮಾಡಿದ್ದಾರೆ. ಈ ಹಿನ್ನಲೆ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲಾಗಿತ್ತು. ಈ ಹಿನ್ನಲೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
