ವಾರಾಣಾಸಿ: ಸ್ಥಳೀಯ ಕೋರ್ಟ್ ಆದೇಶದಂತೆ 2022ರ ಮೇ ತಿಂಗಳಲ್ಲಿ ಬೀಗ ಜಡಿಯಲ್ಪಟ್ಟ ಜ್ಞಾನವಾಪಿ ಮಸೀದಿಯ ಒಂದು ಭಾಗದಲ್ಲಿರುವ ಕೊಳದಲ್ಲಿದ್ದ ಬಹುತೇಕ ಮೀನುಗಳು ಸಾವಿಗೀಡಾಗಿದ್ದು, ಕೆಟ್ಟ ವಾಸನೆ ಹರಡುತ್ತಿದೆ ಎಂದು ಮಸೀದಿಯನ್ನು ನಿರ್ವಹಿಸುತ್ತಿರುವ ಅಂಜುಮನ್ ಇಂತಿಝಾಮಿಯಾ ಮಸೀದಿ ಸಮಿತಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಪತ್ರ ಬರೆದಿದೆ.
ಜ್ಞಾನವಾಪಿ ಮಸೀದಿಯ ವುಝೂಖಾನವನ್ನು ನ್ಯಾಯಾಲಯದ ಆದೇಶದಂತೆ ಮುಚ್ಚಿದಾಗ ಹೌಝ್ ನಲ್ಲಿ ಹಲವು ಮೀನುಗಳಿದ್ದವು. ಈ ಪೈಕಿ ಬಹುತೇಕ ಮೀನುಗಳು ಸತ್ತಿದ್ದು, ಸುತ್ತಮುತ್ತಲೂ ಕೆಟ್ಟ ವಾಸನೆ ಹರಡುತ್ತಿದೆ ಎಂದು ಎಐಎಂಸಿ ಜಂಟಿ ಕಾರ್ಯದರ್ಶಿ ಎಸ್.ಎಂ.ಯಾಸಿನ್ ಹೇಳಿದ್ದಾರೆ.
ಈ ಭಾಗದ ನೀರಿನ ಕೊಳವನ್ನು ಮುಚ್ಚಿರುವುದರಿಂದ ಇದನ್ನು ಸ್ವಚ್ಛಗೊಳಿಸಲು ಅಥವಾ ನೀರನ್ನು ಹೊರಬಿಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಮೀನುಗಳು ಸತ್ತು ಕೆಟ್ಟ ವಾಸನೆ ಹರಡುತ್ತಿದ್ದು, ರೋಗ ಹರಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ರೋಗ ಹರಡಿದರೆ ಅಲ್ಲಿ ನಿಯೋಜಿತರಾಗಿರುವ ಸಿಆರ್ಪಿಎಫ್ ಜವಾನರು, ವಿಶ್ವನಾಥ ದೇಗುಲಕ್ಕೆ ಭೇಟಿ ನೀಡುವ ಯಾತ್ರಿಕರು ಮತ್ತು ಪ್ರವಾಸಿಗರಿಗೆ ಕೂಡಾ ತೊಂದರೆಯಾಗುವ ಸಾಧ್ಯತೆ ಇದೆ” ಎಂದು ಮುಫ್ತಿ- ಎ- ಬನಾರಸ್ ಮತ್ತು ಅಂಜುಮನ್ ಇಂತಿಝಾಮಿಯಾ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಬತೀನ್ ನುಅ್ ಮಾನಿ ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ.