ಬೆಂಗಳೂರು: ದಲಿತ ಸಮುದಾಯದ ಸಚಿವರು ತಮ್ಮನ್ನು ಭೇಟಿ ಮಾಡಿದ ಬೆನ್ನಲೇ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು, ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಪರಿಶಿಷ್ಟ ಜಾತಿಗಳ(ಒಳ ಮೀಸಲಾತಿ) ವಿಧೇಯಕ 2025ಕ್ಕೆ ಗುರುವಾರ ಸಹಿ ಹಾಕಿದ್ದಾರೆ.
ಒಳ ಮೀಸಲಾತಿ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದರಿಂದ ರಾಜ್ಯಪಾಲರು ಈ ಮಸೂದೆಗೆ ಸಹಿ ಹಾಕದೆ ಪೆಂಡಿಂಗ್ ಇಟ್ಟಿದ್ದರು. ಆದರೆ ದಲಿತ ಸಚಿವರ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಒಳ ಮೀಸಲಾತಿ ಮಸೂದೆಗೆ ಅಂಕಿತ ಹಾಕುವಂತೆ ಮನವಿ ಮಾಡಿತ್ತು.
ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಪ್ರಸ್ತಾಪಿಸಿ, ಒಳ ಮೀಸಲಾತಿ ಗೊಂದಲದಿಂದ ನೇಮಕಾತಿ ವಿಳಂಬವಾಗುತ್ತಿದೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ವೇಳೆ ಅಂಕಿತ ಹಾಕುವುದಾಗಿ ಸಚಿವರ ನಿಯೋಗಕ್ಕೆ ರಾಜ್ಯಪಾಲರು ಭರವಸೆ ನೀಡಿದ್ದರು. ಇದೀಗ ಎಸ್ಸಿ ಒಳ ಮೀಸಲಾತಿ ಮಸೂದೆ ರಾಜ್ಯಪಾಲರು ಸಹಿ ಹಾಕಿದ್ದಾರೆ.
ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ 5 ವಿಂಗಡಣೆ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ, 3 ಗುಂಪುಗಳಾಗಿ ವರ್ಗೀಕರಣ ಮಾಡಿದೆ. 18 ಜಾತಿಗಳಿರುವ ಎಡಗೈ ಸಮುದಾಯಕ್ಕೆ(SC Left ) ಶೇ. 6 ರಷ್ಟು ಮೀಸಲಾತಿ ಹಾಗೂ 20 ಜಾತಿಗಳಿರುವ ಬಲಗೈ ಸಮುದಾಯಕ್ಕೆ (SC Right) ಶೇ. 6 ರಷ್ಟು ಮೀಸಲಾತಿ. ಇನ್ನು 63 ಜಾತಿಗಳಿರುವ ಇತರ ಸಮುದಾಯಕ್ಕೆ ಶೇ. 5 ಮೀಸಲಾತಿ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
