ಮುಂಬೈ: ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಸಿ ರಚಿಸಲಾದ ಡೀಪ್ಫೇಕ್ ವಿಡಿಯೋಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, ತಾನು ಕೂಡಾ ಡೀಫ್ ಫೇಕ್ ವಿಡಿಯೋಗಳ ಸಂತ್ರಸ್ತ ಎಂದು ಹೇಳಿದ್ದರು.
ಮಹಿಳೆಯರ ಗುಂಪಿನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಗಾರ್ಬಾ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆದ ಬಳಿಕ, ಹಲವರು ಪ್ರಧಾನಿ ನರೇಂದ್ರ ಮೋದಿ ಅವರ ಡೀಪ್ ಫೇಕ್ ವಿಡಿಯೋ ರಚಿಸಲಾಗಿದೆ ಎಂದು ಭಾವಿಸಿದ್ದರು. ಮಾಧ್ಯಮಗಳು ಕೂಡಾ ಈ ಬಗ್ಗೆ ವರದಿಯನ್ನು ಬಿತ್ತರಿಸಿದ್ದವು.
ಕಳೆದ ವಾರ, ನಕಲಿ ಚಿತ್ರಗಳು ಮತ್ತು ವೀಡಿಯೊಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ದೇಶಕ್ಕೆ ಎಚ್ಚರಿಕೆ ನೀಡುತ್ತಾ ಮಾತನಾಡಿದ್ದ ಪ್ರಧಾನಿ ಮೋದಿ, ʼನಾನು ಶಾಲೆಯನ್ನು ಬಿಟ್ಟಾಗಿನಿಂದ ನಾನು ಗಾರ್ಬಾ ನೃತ್ಯವನ್ನು ಆಡಿಲ್ಲ, ನಾನು ಕೂಡಾ ಡೀಪ್ ಫೇಕ್ ವೀಡಿಯೊಗೆ ಬಲಿಯಾಗಿದ್ದೇನೆʼ ಎಂದಿದ್ದರು.
ಆದರೆ, ಸದ್ಯ ಈ ವಿಡಿಯೋಗೆ ರೋಚಕ ತಿರುವು ಸಿಕ್ಕಿದ್ದು, ವೈರಲ್ ಆಗಿರುವ ವಿಡಿಯೋ ಡೀಪ್ ಫೇಕ್ ಅಲ್ಲ, ಬದಲಿಗೆ ನಿಜವಾದ ವಿಡಿಯೋ ಎಂದು ತಿಳಿದು ಬಂದಿದೆ. ಆದರೆ, ನೃತ್ಯ ಮಾಡುತ್ತಿರುವುದು ಪ್ರಧಾನಿಯಲ್ಲ, ಬದಲಾಗಿ, ಪ್ರಧಾನಿ ಮೋದಿ ಅವರನ್ನೇ ಹೋಲುವ ವ್ಯಕ್ತಿ ಎಂದು ವರದಿ hindustantimes ವರದಿ ಮಾಡಿದೆ. ತನ್ನನ್ನೇ ಹೋಲುವ ವ್ಯಕ್ತಿಯ ವಿಡಿಯೋವನ್ನು ಪ್ರಧಾನಿ ಮೋದಿಯವರು ಡೀಪ್ ಫೇಕ್ ಎಂದು ತಪ್ಪಾಗಿ ಗ್ರಹಿಸಿದ್ದು, ಈ ಗೊಂದಲಕ್ಕೆ ಕಾರಣವಾಗಿದೆ.
ಮಲಾಡ್ನಲ್ಲಿ ಸ್ಟೀಲ್ ಪ್ಯಾಕೇಜಿಂಗ್ ವ್ಯವಹಾರ ನಡೆಸುತ್ತಿರುವ ವಿಕಾಸ್ ಮಹಾಂತೇ ಎಂಬವರ ವಿಡಿಯೋ ಇದಾಗಿದ್ದು, ವಿಕಾಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೋಲುವುದರಿಂದ ವಿಶ್ವದಾದ್ಯಂತ ನರೇಂದ್ರ ಮೋದಿ ಅವರ ಅಭಿಮಾನಿಗಳಿಂದ ಹಲವು ಕಾರ್ಯಕ್ರಮಗಳಿಗೆ ಆಹ್ವಾನಿತರಾಗುತ್ತಿದ್ದಾರೆ.
ಅದರಂತೆ, ಬ್ರಿಟನ್ ಮೂಲದ ಪಂಕಜ್ ಸೋಧಾ ಎಂಬವರು ತಮ್ಮ ಕುಟುಂಬದ ಪೂರ್ವ ದೀಪಾವಳಿ ಹಬ್ಬಗಳಲ್ಲಿ ಭಾಗವಹಿಸಲು ವಿಕಾಸ್ ಮಹಾಂತೆಯವರನ್ನು ಲಂಡನ್ಗೆ ಕರೆಸಿದ್ದರು. ಆ ಸಂದರ್ಭದಲ್ಲಿ ಸೋಧಾ ಅವರ ಕುಟುಂಬದ ಮಹಿಳೆಯರೊಂದಿಗೆ ಮಹಾಂತೇ ಗರ್ಬಾ ನೃತ್ಯ ಆಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರ ಡೀಪ್ ಫೇಕ್ ವಿಡಿಯೋ ಇದು ಎಂಬ ಹುಯಿಲೆಬ್ಬಿದೆ.
“ಭಾರತ ಮತ್ತು ವಿದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನನ್ನನ್ನು ಆಗಾಗ್ಗೆ ಆಹ್ವಾನಿಸಲಾಗುತ್ತದೆ, ಅಲ್ಲಿ ನಾನು ಮೋದಿಜಿಯವರ ಆಲೋಚನೆಗಳು ಮತ್ತು ಆಲೋಚನೆಗಳನ್ನು ತಿಳಿಸಲು ಪ್ರಯತ್ನಿಸುತ್ತೇನೆ” ಎಂದು ವಿಕಾಸ್ ಮಹಾಂತೇ ಅವರು ಹೇಳಿದ್ದಾರೆ.
ತನ್ನ ವಿಡಿಯೋದ ಸುತ್ತ ಹಬ್ಬಿರುವ ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಅವರು, “ವೀಡಿಯೊ ಡೀಪ್ ಫೇಕ್ ಅಲ್ಲ. ಆ ವಿಡಿಯೋದಲ್ಲಿರುವ ವಿಕಾಸ್ ಮಹಾಂತೆ ನಾನೇ ಎಂದು ಹೇಳಲು ಬಯಸುತ್ತೇನೆ. ನಾನು ಉದ್ಯಮಿ ಮತ್ತು ಕಲಾವಿದ” ಎಂದು ಅವರು ತಿಳಿಸಿದ್ದಾರೆ.
ಪ್ರಧಾನಮಂತ್ರಿಯಂತೆ ವಸ್ತ್ರ ಧರಿಸಿರುವ ಹಾಗೂ ಅವರನ್ನೇ ಹೋಲುವ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಗಾರ್ಬಾ ನೃತ್ಯ ಮಾಡಿದ್ದಾರೆ ಎಂದು ವಿಡಿಯೋ ವೈರಲ್ ಆಗಿತ್ತು.
ನಾನು ಮೋದಿಯನ್ನು ಒಮ್ಮೆ ಭೇಟಿಯಾಗಿದ್ದೆ. ನಾವು ಸ್ವಲ್ಪ ಮಾತನಾಡಿದ್ದೇವೆ. ಆದರೆ ಅವರೊಂದಿಗೆ ಛಾಯಾಚಿತ್ರ ತೆಗೆದುಕೊಳ್ಳಲು ನನಗೆ ಅವಕಾಶ ಸಿಕ್ಕಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
