ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಪೇಯಿಂಗ್ ಗೆಸ್ಟ್ (PG) ವಸತಿ ಗೃಹಗಳ ವಿರುದ್ಧ ಬೆಂಗಳೂರು ಪೂರ್ವ ನಗರ ಪಾಲಿಕೆ ಕ್ರಮಕ್ಕೆ ಮುಂದಾಗಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳ ಪಾಲನೆ ಪರಿಶೀಲಿಸಲು ಆರೋಗ್ಯ ಇಲಾಖೆ ಹಾಗೂ ನಗರ ಯೋಜನಾ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ಪರಿಶೀಲನಾ ತಂಡವನ್ನು ರಚಿಸಲಾಗಿದೆ.
ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ 15 ದಿನಗಳೊಳಗೆ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಕಟ್ಟಡಗಳು ಅನುಮೋದಿತ ಯೋಜನೆಯಂತೆ ನಿರ್ಮಾಣವಾಗಿದೆಯೇ, ವಾಣಿಜ್ಯ ವಲಯದಲ್ಲಿದೆಯೇ, ಅಗ್ನಿಶಾಮಕ ಇಲಾಖೆಯಿಂದ ಎನ್ಒಸಿ ಪಡೆದಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.
ಇದೇ ವೇಳೆ ಸಿಸಿಟಿವಿ ವ್ಯವಸ್ಥೆ, ಪ್ರತಿಯೊಬ್ಬ ನಿವಾಸಿಗೆ ಕನಿಷ್ಠ 70 ಚದರ ಅಡಿ ಸ್ಥಳಾವಕಾಶ, ಪ್ರಥಮ ಚಿಕಿತ್ಸೆ ಸೌಲಭ್ಯ, ಸುರಕ್ಷಿತ ಕುಡಿಯುವ ನೀರು, ಆಹಾರ ತಯಾರಿಕೆ ನಡೆಸಿದರೆ FSSAI ಪ್ರಮಾಣಪತ್ರ, ಭದ್ರತಾ ವ್ಯವಸ್ಥೆ, ಕಸದ ವಿಂಗಡಣೆ ಹಾಗೂ ತುರ್ತು ಸಂಪರ್ಕ ಸಂಖ್ಯೆಗಳ ಪ್ರದರ್ಶನ ಸೇರಿದಂತೆ ಹಲವು ಅಂಶಗಳನ್ನು ತಪಾಸಣೆ ಮಾಡಲು ಸೂಚಿಸಲಾಗಿದೆ.
ನಿಯಮ ಉಲ್ಲಂಘಿಸಿರುವ ಪಿಜಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದರ ಜೊತೆಗೆ, ಆಯುಕ್ತರು ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ 2027ರ ರಾಷ್ಟ್ರೀಯ ಜನಗಣತಿ ಸಿದ್ಧತೆಗಳನ್ನೂ ಪರಿಶೀಲಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಚಾರ್ಜ್ ಅಧಿಕಾರಿ, ಸಹಾಯಕ ಚಾರ್ಜ್ ಅಧಿಕಾರಿ, ಗಣತಿದಾರ ಮೇಲ್ವಿಚಾರಕರು, ಗಣತಿದಾರರು, ತಾಂತ್ರಿಕ ಸಹಾಯಕರು ಸೇರಿದಂತೆ ಅಗತ್ಯ ಮಾನವ ಸಂಪನ್ಮೂಲಗಳನ್ನು ನಿಯೋಜಿಸಿ, ತರಬೇತಿ ನೀಡುವಂತೆ ಸೂಚನೆ ನೀಡಲಾಗಿದೆ.
ಈ ಕಾರ್ಯಾಚರಣೆ ನಗರದಲ್ಲಿ ಪಿಜಿ ವಸತಿ ಗೃಹಗಳ ಸುರಕ್ಷತೆ ಹಾಗೂ ನಿಯಂತ್ರಣವನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.
