ಬೆಂಗಳೂರು, ಫೆಬ್ರವರಿ 17: ಪೊಲೀಸರಂತೆ ವೇಷಧರಿಸಿದ ನಾಲ್ವರು ಸದಸ್ಯರ ಗ್ಯಾಂಗ್ ಉತ್ತರ ಬೆಂಗಳೂರಿನ ಬಿಇಎಲ್ ಲೇಔಟ್ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಮನೆಯಲ್ಲಿ ದರೋಡೆ ನಡೆಸಿ ₹20 ಲಕ್ಷ ನಗದು ಹಾಗೂ ಸುಮಾರು ಅರ್ಧ ಕೆಜಿ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಹೊಂಬಾಳೆಗೌಡ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರು ಪತ್ನಿ ಮಂಗಳಮ್ಮ ಹಾಗೂ ಮೊಮ್ಮಕ್ಕಳೊಂದಿಗೆ ಮನೆಯಲ್ಲಿ ಇದ್ದ ವೇಳೆ ಆರೋಪಿಗಳು ಮನೆಗೆ ಬಂದಿದ್ದಾರೆ. ತಾವು ಯಲಹಂಕ ಠಾಣೆಯಿಂದ ಬಂದಿದ್ದೇವೆ ಎಂದು ಹೇಳಿ ಬ್ಯಾಗ್ ಹಾಗೂ ಡೈರಿ ಹಿಡಿದು ಬಂದಿದ್ದರಿಂದ ಆರಂಭದಲ್ಲಿ ಮನೆಯವರು ಅವರ ಮಾತು ನಂಬಿದ್ದಾರೆ.
ಆದರೆ ಬಳಿಕ ಆರೋಪಿಗಳು ಬಂದೂಕು ಮತ್ತು ಚಾಕುವಿನಿಂದ ಬೆದರಿಸಿ ವೃದ್ಧ ದಂಪತಿಯ ಕೈಕಾಲುಗಳನ್ನು ಕಪ್ಪು ಟೇಪ್ನಿಂದ ಕಟ್ಟಿ ಮನೆಯೆಲ್ಲಾ ಶೋಧ ನಡೆಸಿದ್ದಾರೆ. ನಗದು, ಚಿನ್ನಾಭರಣ ಹಾಗೂ ಮೊಬೈಲ್ ಫೋನ್ಗಳನ್ನು ದೋಚಿಕೊಂಡಿದ್ದಾರೆ.
ನಾಲ್ವರಲ್ಲಿ ಇಬ್ಬರು ಮನೆ ಒಳಗೆ ನುಗ್ಗಿ ದರೋಡೆ ನಡೆಸಿದ್ದರೆ, ಇನ್ನಿಬ್ಬರು ಹೊರಗಡೆ ನಿಂತು ಕಾವಲು ಕಾಯ್ದಿದ್ದರು ಎನ್ನಲಾಗಿದೆ. ಕೃತ್ಯ ಎಸಗಿದ ಬಳಿಕ ಮನೆಯ ಸಿಸಿಟಿವಿ ಡಿವಿಆರ್ ಅನ್ನು ಕಳಚಿಕೊಂಡು ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಪೊಲೀಸರ ಸೋಗಿನಲ್ಲಿ ದರೋಡೆ ನಡೆಸಿದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
