ಕೊಣಾಜೆ : ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಆ ಮೊಬೈಲ್ಗಾಗಿ ತಗ್ಗಿಸಿದ ತಲೆ ಎತ್ತದಂತೆ ಮಾಡುತ್ತದೆ. ಆದರೆ ಅಕ್ಷರ ಕಲಿಯಲು ಪುಸ್ತಕದ ಮುಂದೆ ತಲೆ ತಗ್ಗಿಸಿದರೆ ಮುಂದಕ್ಕೆ ಅಧಿಕಾರದೊಂದಿಗೆ ತಲೆ ಎತ್ತಿ ನಡೆಯುವಂತೆ ಮಾಡುತ್ತದೆ ಎಂದು ಪ್ರೇರಣಾ ಭಾಷಣಗಾರ ಮುಹಮ್ಮದ್ ರಫೀಕ್ ಮಾಸ್ಟರ್ ಅಭಿಪ್ರಾಯಪಟ್ಟರು.
ಪಾವೂರು-ಹರೇಕಳ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಪಿಜೆ ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ, ಮದರ್ ಥೆರೆಸಾ ಅಂತಹವರಿಗೆ ಹೇಗೆ ಬೆಲೆ ಕಟ್ಟಲಾಗದೋ ಅದೇ ರೀತಿ ಶಿಕ್ಷಣಕ್ಕೂ ಬೆಲೆ ಕಟ್ಟಲಾಗದು. ಜಗತ್ತಿನ ಅತೀ ಶ್ರೀಮಂತ ವ್ಯಕ್ತಿ ಸಂಸ್ಕಾರಯುತ ಶಿಕ್ಷಣ ನೀಡುವ ಮತ್ತು ಪಡೆಯುವ ವ್ಯಕ್ತಿಯಾಗಿರುತ್ತಾರೆ. ಶಾಲಾ ದಿನಗಳಲ್ಲಿ ಮಕ್ಕಳ ಗಮನ ಶಿಕ್ಷಕರ ಪಾಠದತ್ತ ಇದ್ದಾಗ ಜೀವನದಲ್ಲಿ ದೊಡ್ಡ ಹುದ್ದೆ ಪಡೆಯುವುದು ಕಠಿಣವಲ್ಲ ಎಂದು ರಫೀಕ್ ಮಾಸ್ಟರ್ ಅಭಿಪ್ರಾಯಪಟ್ಟರು.
ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ.ಎನ್.ಆಳ್ವ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಉದ್ಯಮಿ ಸಂದೇಶ್ ಶೆಟ್ಟಿ ಕೊಳ್ಕೆ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಸಜಿಪ, ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಥಾಲಿಯನ್ ಎಡ್ವರ್ಡ್ ಐವನ್, ಶಾಲೆಯ ಪ್ರಧಾನ ಕಾರ್ಯದರ್ಶಿ ರಾಜ್ಕುಮಾರ್ ಶೆಟ್ಟಿ, ಶಾಲಾ ಸಂಚಾಲಕ ಸೋಮಶೇಖರ್ ಚೌಟ, ಕೋಶಾಧಿಕಾರಿ ಜಯರಾಮ ಆಳ್ವ ಪೋಡಾರ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜನಾರ್ದನ್ ಮತ್ತು ಸದಾಶಿವ ಆಚಾರ್ಯ, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಉಷಲತಾ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಸ್ವಾಗತಿಸಿದರು. ಶಿಕ್ಷಕರಾದ ಲಕ್ಷ್ಮಿ, ಕೃಷ್ಣ ಶಾಸ್ತ್ರಿ, ಕುಮುದಾ, ಶಿವಕುಮಾರ್ ಬಹುಮಾನಿತರ ಹೆಸರು ವಾಚಿಸಿದರು. ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಾಧಾಕೃಷ್ಣ ರೈ ವಂದಿಸಿದರು. ಶಿಕ್ಷಕ ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು.
