ಮೊರಾದಾಬಾದ್: ಬಸ್ ನಿಲ್ದಾಣದಲ್ಲಿ ತನ್ನ ನವ ವಿವಾಹಿತ ಪತಿಗೆ ಪಕೋಡಾ ತರಲು ಹೇಳಿದ ಮಹಿಳೆಯೊಬ್ಬಳು ಆತ ಹೋಗುತ್ತಿದ್ದಂತೆಯೇ ಲವರ್ ಜೊತೆ ಪರಾರಿಯಾಗಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಮ್ರೋಹಾ ಜಿಲ್ಲೆಯ ನಿವಾಸಿ ಪ್ರೀತಮ್ ಸಿಂಗ್ ಎಂಬಾತನನ್ನು ವಂಚಿಸಿ ರಾಂಪುರ ಜಿಲ್ಲೆಯ ನಿವಾಸಿ 18 ವರ್ಷದ ರಿಮ್ಜಿಮ್ ಪರಾರಿಯಾಗಿದ್ದಾರೆ. ಇಬ್ಬರಿಗೂ ಕಳೆದ ವರ್ಷ ಡಿಸೆಂಬರ್ 1ರಂದು ವಿವಾಹವಾಗಿತ್ತು.
ಹೋಳಿ ಹಬ್ಬದ ನಿಮಿತ್ತ ನವವಿವಾಹಿತೆ ರಿಮ್ಜಿಮ್ ತನ್ನ ತವರು ಮನೆಗೆ ಹೋಗುವುದಾಗಿ ಪತಿ ಪ್ರೀತಮ್ ಸಿಂಗ್ ಹೇಳಿದ್ದಳು. ಅದರಂತೆ ಆಕೆಯನ್ನು ತವರುಮನೆಗೆ ಕಳುಹಿಸಲಾಗಿತ್ತು. ಮಾರ್ಚ್ 9 ರಂದು ಪ್ರೀತಮ್ ಸಿಂಗ್ ತನ್ನ ಪತ್ನಿಯನ್ನು ವಾಪಸ್ ಕರೆತರಲು ಹೋಗಿದ್ದ. ಅದರಂತೆ ಪತ್ನಿಯನ್ನು ಬಸ್ ನಲ್ಲಿ ಕರೆತರುವಾಗ ಬೇರೊಂದು ಬಸ್ ಬದಲಾವಣೆ ಮಾಡಿಕೊಳ್ಳಲು ಬಿಲಾರಿ ಬಸ್ ನಿಲ್ದಾಣದಲ್ಲಿ ಇಳಿದಿದ್ದಾರೆ.
ಈ ವೇಳೆ ರಿಮ್ಜಿಮ್ ಹಸಿವಾಗುತ್ತಿದೆ.. ಪಕೋಡ ತರುವಂತೆ ಪತಿಗೆ ಹೇಳಿದ್ದಾಳೆ. ಅದರಂತೆ ಪತಿ ಪಕೋಡಾ ತರಲು ಹೋಗಿದ್ದಾನೆ. ಪಕೋಡ ತೆಗೆದುಕೊಂಡು ವಾಪಸ್ ಬಂದಾಗ ಪತ್ನಿ ಕಾಣೆಯಾಗಿದ್ದಳು.
ಶೌಚಾಲಯಕ್ಕೆ ಹೋಗಿರಬಹುದು ಎಂದು ಕೆಲಕಾಲ ಕಾದರೂ ಆಕೆ ಬಾರದೇ ಇದ್ದಿದ್ದರಿಂದ ಅನುಮಾನಗೊಂಡ ಪ್ರೀತಮ್ ಸ್ಥಳೀಯರನ್ನು ಪ್ರಶ್ನಿಸಿದ್ದಾರೆ. ಆಗ ಎಲ್ಲರೂ ತಾವು ನೋಡಿಲ್ಲ ಎಂದಾಗ ಆತ ಬೇರೆ ದಾರಿ ಇಲ್ಲದೇ ಪೊಲೀಸ್ ದೂರು ದಾಖಲಿಸಿದ್ದಾನೆ.
ಅಲ್ಲದೆ ದೂರಿನಲ್ಲಿ ತನ್ನ ಹೆಂಡತಿ ತನ್ನ ಆಕೆಯ ತವರು ಹಳ್ಳಿಯ ಯುವಕನೊಂದಿಗೆ ಪರಾರಿಯಾಗಿರಬಹುದು ಎಂದು ಶಂಕಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ. ಆಕೆಯ ಚಲನವಲನಗಳನ್ನು ಪತ್ತೆಹಚ್ಚಲು ಅವರು ಆಕೆಯ ಮೊಬೈಲ್ ಫೋನ್ ಸ್ಥಳವನ್ನು ಸಹ ಪರಿಶೀಲಿಸುತ್ತಿದ್ದಾರೆ.
