ಬೆಂಗಳೂರು: ಬಾಡಿಗೆ ಮನೆ ಹುಡುಕುವ ನೆಪದಲ್ಲಿ ನಾಗೊಂಡನಹಳ್ಳಿಯಲ್ಲಿ ಮನೆಯೊಳಗೆ ನುಗ್ಗಿ 348 ಗ್ರಾಂ ಚಿನ್ನಾಭರಣಗಳನ್ನು (ಸುಮಾರು ₹55 ಲಕ್ಷ ಮೌಲ್ಯ) ಕಳವು ಮಾಡಿದ ಆರೋಪದಲ್ಲಿ ವೈಟ್ಫೀಲ್ಡ್ ನಿವಾಸಿ ಹಾಗೂ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಕಿರಣ್ರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಕೋವಿಡ್ ಅವಧಿಯಲ್ಲಿ ಫೋಟೋ ಸ್ಟುಡಿಯೋಗೆ ನಷ್ಟವಾಗಿದ್ದರಿಂದ ಅದನ್ನು ಮುಚ್ಚಿದ ಕಿರಣ್, ಸಣ್ಣಪುಟ್ಟ ಕಾರ್ಯಕ್ರಮಗಳ ಫೋಟೋಗ್ರಫಿ ಕೆಲಸಗಳ ಮೂಲಕ ಜೀವನ ನಡೆಸುತ್ತಿದ್ದ. ಈ ಮಧ್ಯೆ ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೊಂಡನಹಳ್ಳಿಯಲ್ಲಿ ‘ಮನೆ ಬಾಡಿಗೆಗೆ’ ಎಂಬ ಬೋರ್ಡ್ ಗಮನಿಸಿದ ಆತ, ಮನೆ ಮಾಲೀಕ ಸಾಫ್ಟ್ವೇರ್ ಇಂಜಿನಿಯರ್ ಜಗದೀಶ್ ಅವರ ಮನೆ ಬಳಿ ವಿಚಾರಿಸಲು ತೆರಳಿದ್ದಾನೆ.
ಅಲ್ಲಿ ಶೂ ರ್ಯಾಕ್ನಲ್ಲಿ ಮನೆಯ ಕೀಲಿ ಇರುವುದನ್ನು ಗಮನಿಸಿದ ಆರೋಪಿ, ಅದನ್ನು ಬಳಸಿಕೊಂಡು ಮನೆಯ ಬಾಗಿಲು ತೆರೆದು ಒಳನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಬೆಳಕಿಗೆ ಬಂದ ಬಳಿಕ ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚಿದರು. ಈ ನಡುವೆ ಆತ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪಗೊಂಡು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದರ್ಶನ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲಿಂದ ಹಿಂದಿರುಗುತ್ತಿದ್ದಾಗಲೇ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಕೃತ್ಯ ಒಪ್ಪಿಕೊಂಡಿದ್ದು, ಆತನ ಹೇಳಿಕೆಯ ಮೇರೆಗೆ 348 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನಾಗರಿಕರು ಮನೆಯ ಕೀಲಿಗಳನ್ನು ಸುಲಭವಾಗಿ ಕಂಡುಬರುವ ಸ್ಥಳಗಳಲ್ಲಿ ಇಡಬಾರದು, ಭದ್ರತಾ ಕ್ರಮಗಳನ್ನು ಅನುಸರಿಸಬೇಕು ಮತ್ತು ಸಂಶಯಾಸ್ಪದ ಚಟುವಟಿಕೆಗಳನ್ನು ತಕ್ಷಣ 112ಕ್ಕೆ ಮಾಹಿತಿ ನೀಡಿ ಪೊಲೀಸ್ ಸಹಾಯ ಪಡೆಯಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.
