ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) 3ನೇ ಪ್ರಯತ್ನ ಅಂತಿಮ ಘಟ್ಟ ತಲುಪಿದೆ. ಬೆಂಗಳೂರು: ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) 3ನೇ ಪ್ರಯತ್ನ ಅಂತಿಮ ಘಟ್ಟ ತಲುಪಿದೆ.
ಚಂದ್ರಯಾನ- 3 ಬಾಹ್ಯಾಕಾಶ ನೌಕೆಯನ್ನು ಒಳಗೊಂಡ ಪೇಲೋಡ್ ಅನ್ನು ಜಿಯೋ ಸಿಂಕ್ರೊನಸ್ ಲಾಂಚ್ ವೆಹಿಕಲ್ ಮಾರ್ಕ್ III (ಜಿಎಸ್‌ಎಲ್‌ವಿ ಎಂಕೆ-III) ಉಡಾವಣಾ ನೌಕೆಗೆ ಬುಧವಾರ ಸೇರ್ಪಡೆಗೊಳಿಸಲಾಗಿದೆ.
ಭಾರತದ ಅತಿ ತೂಕದ ರಾಕೆಟ್‌ಗೆ ಪೇಲೋಡ್ ಫೇರಿಂಗ್ (ನೌಕೆಯ ಪೇಲೋಡ್‌ಗೆ ರಕ್ಷಣೆ ನೀಡಲು ಇರುವ ಮೂಗಿನ ಆಕಾರದ ಸಾಧನ) ಜೋಡಣೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ನೆರವೇರಿಸಲಾಯಿತು.
ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನಲ್ಲಿನ ಸಂಶೋಧನೆಯ ಉದ್ದೇಶ ಹೊಂದಿರುವ ಚಂದ್ರಯಾನ- 3 ಯೋಜನೆಯು ಜುಲೈ 13 ರಂದು ಮಧ್ಯಾಹ್ನ 2.30 ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗು ನಿರೀಕ್ಷೆಗಳಿವೆ.
ಮಿಷನ್ ಚಂದ್ರಯಾನ-2 ನಾಲ್ಕು ವರ್ಷಗಳ ಹಿಂದೆ 2019 ರಲ್ಲಿ ಚಂದ್ರನ ಮೇಲ್ಮೈಯಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿತ್ತು. ಈಗಿನ ಚಂದ್ರಯಾನ-3 ಅದರ ಮುಂದುವರಿದ ಭಾಗವಾಗಿದೆ. ಹಿಂದಿನ ಲ್ಯಾಂಡರ್‌ಗಿಂದಲೂ ಈ ಬಾರಿಯ ವಿಕ್ರಮ್ ಲ್ಯಾಂಡರ್ ಪ್ರಬಲವಾದ ಕಾಲುಗಳನ್ನು ಹೊಂದಿದೆ. ಚಂದ್ರಯಾನ-2ರ ‘ಭಾಗಶಃ ವೈಫಲ್ಯ’ದ ಬಳಿಕ ಕೆಲವು ಪಾಠ ಕಲಿತಿರುವ ಇಸ್ರೋ, ಹಲವಾರು ಬದಲಾವಣೆಗಳನ್ನು ಮಾಡಿದೆ.
ಚಂದ್ರಯಾನ – 3 ಮಿಷನ್ ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸಲಿದೆ ಮತ್ತು ಚಂದ್ರನ ಮೇಲ್ಮೈಯಲ್ಲಿ ನಿಧಾನವಾಗಿ ಇಳಿಯಲು ಪ್ರಯತ್ನಿಸಲಿದೆ. ಇದು ಯಶಸ್ವಿಯಾದರೆ ಭಾರತವು ಚಂದ್ರನ ಮೇಲಿಳಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ.
ಚಂದ್ರನ ಮೇಲೆ ಇಳಿಯಲು ಹಲವಾರು ರೀತಿಯಲ್ಲಿ ತಂತ್ರಜ್ಞಾನವನ್ನು ವ್ಯವಸ್ಥೆಗೊಳಿಸಬೇಕಾಗುತ್ತದೆ. ಅತ್ಯಂತ ನಿಖರವಾದ ನ್ಯಾವಿಗೇಷನ್ ಮಾರ್ಗದರ್ಶನ, ನಿಖರವಾದ ಫ್ಲೈಟ್ ಡೈನಾಮಿಕ್ಸ್, ಸ್ಪಷ್ಟವಾದ ಭೂಪ್ರದೇಶದ ಚಿತ್ರಣ, ಸಂಪೂರ್ಣವಾಗಿ ಸಮಯದ ಥ್ರಸ್ಟರ್ ಫೈರಿಂಗ್‌ಗಳು ಮತ್ತು ಅಂತಿಮವಾಗಿ ಸರಿಯಾದ ಲ್ಯಾಂಡಿಂಗ್ ಸ್ಥಳವನ್ನು ತಲುಪಲು ಸರಿಯಾದ ಕ್ಷಣದಲ್ಲಿ ಮತ್ತು ಸರಿಯಾದ ವೇಗದಲ್ಲಿ ನಿಧಾನಗೊಳಿಸುವ ಸಾಮರ್ಥ್ಯ ಈ ಎಲ್ಲವೂ ಚಂದ್ರನ ಮೇಲೆ ನೌಕೆಯೊಂದನ್ನು ಇಳಿಸಲು ನಿರ್ಣಾಯಕ ಅಂಶಗಳಾಗಿವೆ. ಈ ಪ್ರಕ್ರಿಯೆಗಳಲ್ಲಿ ಯಾವುದೇ ಒಂದು ತಪ್ಪಾದರೂ ಇಡೀ ಯೋಜನೆ ವಿಫಲವಾಗಬಹುದು.