ಇಂಧೋರ್: ಅಕ್ರಮ ಸಂಬಂಧದ ಆರೋಪದಲ್ಲಿ ಹೋಟೆಲ್ ವೊಂದರ ಮಾಲಕ ಹಾಗೂ ಆತನ ಪ್ರೇಯಸಿಯನ್ನು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಏರೋಡ್ರೋಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದಂಪತಿ ಮಮತಾ (32) ಹಾಗೂ ನಿತಿನ್ ಪವಾರ್ (35) ಅವರನ್ನು ರವಿವಾರ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಲೋಕ್ ಕುಮಾರ್ ಶರ್ಮಾ ಹೇಳಿದ್ದಾರೆ.
ಹೋಟೆಲ್ ಮಾಲಕ ರವಿ ಠಾಕೂರ್ (42) ಮತ್ತು ಆತನ ಪ್ರೇಯಸಿ ಸರಿತಾ ಠಾಕೂರ್ (38) ಅವರ ಮೃತದೇಹಗಳು ವಿವಸ್ತ್ರ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ವಿವರಿಸಿದ್ದಾರೆ.
ಸರಿತಾ, ಹೋಟೆಲ್ ಮಾಲಕನಿಗೆ ಮಮತಾಳನ್ನು ಪರಿಚಯಿಸಿದ್ದಳು. ಅವರ ಸ್ನೇಹ ಸಂಬಂಧ ಕ್ರಮೇಣ ಅಕ್ರಮ ಸಂಬಂಧವಾಗಿ ಬೆಳೆಯಿತು ಎಂದು ಹೇಳಲಾಗಿದೆ.
ನಿತಿನ್ ಗೆ ಈ ಅಕ್ರಮ ಸಂಬಂಧದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ದಂಪತಿ ನಡುವೆ ಜಗಳ ಆರಂಭವಾಗಿತ್ತು. ಮಮತಾಳ ಆಕ್ಷೇಪಾರ್ಹ ವಿಡಿಯೊವನ್ನು ಬಳಸಿಕೊಂಡು ಅಕ್ರಮ ಸಂಬಂಧವನ್ನು ಮುಂದುವರಿಸುವಂತೆ ರವಿ ಠಾಕೂರ್ ಬಲವಂತಪಡಿಸಿದ್ದ ಎನ್ನಲಾಗಿದೆ.
ಹೋಟೆಲ್ ಮಾಲಕ ರವಿ ಠಾಕೂರ್ ಅವರನ್ನು ಸರಿತಾಳ ಮನೆಗೆ ಆಹ್ವಾನಿಸಿದ ಮಮತಾ, ಅಲ್ಲಿ ತನ್ನ ಪತಿಯ ಸಹಾಯದಿಂದ ಹತ್ಯೆ ನಡೆಸಿದಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.