Home Uncategorized ಅಪಹರಣ: ತಪಾಸಣೆ ವೇಳೆ ರಕ್ಷಣೆಗೆ ಕೂಗಿದ ಯುವಕ, ಕಾರು ಬೆನ್ನಟ್ಟಿ ಸಿನಿಮೀಯ ಶೈಲಿಯಲ್ಲಿ ಯುವಕನ ರಕ್ಷಿಸಿದ...

ಅಪಹರಣ: ತಪಾಸಣೆ ವೇಳೆ ರಕ್ಷಣೆಗೆ ಕೂಗಿದ ಯುವಕ, ಕಾರು ಬೆನ್ನಟ್ಟಿ ಸಿನಿಮೀಯ ಶೈಲಿಯಲ್ಲಿ ಯುವಕನ ರಕ್ಷಿಸಿದ ಪೊಲೀಸರು!

36
0

ಹಣಕ್ಕಾಗಿ ಯುವಕನೊಬ್ಬನನ್ನು ಅಪಹರಿಸಿ ಕರೆದೊಯ್ಯುತ್ತಿದ್ದ ಅಪಹರಣಕಾರರ ಕಾರನ್ನು ಬೆನ್ನಟ್ಟಿದ ಬಂಡೆಪಾಳ್ಯ ಪೊಲೀಸರು ಯುವಕನನ್ನು ರಕ್ಷಣೆ ಮಾಡಿ, ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಬೆಂಗಳೂರು: ಹಣಕ್ಕಾಗಿ ಯುವಕನೊಬ್ಬನನ್ನು ಅಪಹರಿಸಿ ಕರೆದೊಯ್ಯುತ್ತಿದ್ದ ಅಪಹರಣಕಾರರ ಕಾರನ್ನು ಬೆನ್ನಟ್ಟಿದ ಬಂಡೆಪಾಳ್ಯ ಪೊಲೀಸರು ಯುವಕನನ್ನು ರಕ್ಷಣೆ ಮಾಡಿ, ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

ಬುಧವಾರ ರಾತ್ರಿ 11.40ರ ಸುಮಾರಿಗೆ ಕೋರಮಂಗಲದ 100 ಅಡಿ ರಸ್ತೆಯಲ್ಲಿ ನಿತ್ಯ ವಾಹನ ತಪಾಸಣೆ ನಡೆಸುತ್ತಿದ್ದ ಆಡುಗೋಡಿ ಪೊಲೀಸರನ್ನು ಕಂಡ ಆರೋಪಿಗಳು ಗಾಬರಿಗೊಂಡಿದ್ದಾರೆ. ಕೂಡಲೇ ಕಾರಿನ ಚಾಲಕ ಭದ್ರತಾ ಬ್ಯಾರಿಕೇಡ್ ಇದ್ದ ಸ್ಥಳಕ್ಕೆ ನುಗ್ಗಿ ಪರಾರಿಯಾಗಲು ಮುಂದಾಗಿದ್ದಾನೆ. ಈ ವೇಳೆ ಯುವಕ ರಕ್ಷಣೆಗಾಗಿ ಕೂಗಿದ್ದಾನೆ.

ಕೂಡಲೇ ಪೊಲೀಸರು ಕಾರನ್ನು ಸುಮಾರು 2 ಕಿ.ಮೀ ದೂರದವರೆಗೆ ಹಿಂಬಾಲಿಸಿದ್ದು, ಕೊನೆಗೆ ಕೋರಮಂಗಲ ವಾಟರ್ ಟ್ಯಾಂಕ್ ಬಳಿ ಕಾರನ್ನು ತಡೆದಿದ್ದಾರೆ. ಅಷ್ಟೊತ್ತಿಗಾಗಲೇ ಮೂವರು ಆರೋಪಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಪೊಲೀಸರು ಯುವಕನನ್ನು ರಕ್ಷಣೆ ಮಾಡಿ ಓರ್ವ ಆರೋಪಿ ಗೋಪಿ ಎಂಬಾತನನ್ನು ಬಂಧನಕ್ಕೊಳಪಡಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ ಅಪಹರಣ ಪ್ರಕರಣ: ಬಾಲಕನ ರಕ್ಷಣೆ, ಇಬ್ಬರು ಆರೋಪಿಗಳ ಬಂಧನ

ಈ ನಡುವೆ ಯುವಕನ ಪೋಷಕರು ತಮ್ಮ ಮಗನ ಅಪಹರಣವಾದ 3 ದಿನಗಳ ನಂತರ ಬುಧವಾರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಯುವಕನ ರಕ್ಷಣೆಯಾಗಿರುವ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ.

ಬಂಡೆಪಾಳ್ಯದ ತೌಹಿದ್ ಅಪಹರಣಕ್ಕೊಳಗಾದ ಯುವಕನಾಗಿದ್ದಾನೆ. ಆರೋಪಿಗಳು ಮೂರು ದಿನಗಳ ಹಿಂದೆ ಈತನನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಇರಿಸಿದ್ದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಯುವಕನ ಪೋಷಕರಿಗೆ ಕರೆ ಮಾಡಿರುವ ಆರೋಪಿಗಳು, ರೂ.60,000ಕ್ಕೆ ಬೇಡಿಕೆ ಇರಿಸಿದ್ದಾರೆ. ಅಲ್ಲದೆ, ಪೊಲೀಸರಿಗೆ ಮಾಹಿತಿ ನೀಡಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಈ ನಡುವೆ ಬೆದರಿಕೆ ಹೆದರಿಸಿದ ತೌಹಿದ್ ತಾಯಿ ಬುಧವಾರ ಸಂಜೆ 4.30ರ ಸುಮಾರಿಗೆ ಆರೋಪಿಗಳಿಗೆ ರೂ.35,000 ನೀಡಿ, ಮಗನನ್ನು ಬಿಡುಗಡೆ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಆದರೂ, ಆರೋಪಿಗಳು ಯುವಕನನ್ನು ಬಿಟ್ಟಿಲ್ಲ. ನಂತರ ಪೋಷಕರು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪೊಲೀಸರ ಮೇಲೆ ರೌಡಿಗಳಿಂದ ಹಲ್ಲೆ, ಗುಂಡು ಹಾರಿಸಿ ಇಬ್ಬರ ಬಂಧನ

ದೂರು ದಾಖಲಾಗುವ ಮುನ್ನವೇ ಪೊಲೀಸರು ತೌಹಿದ್ ನನ್ನು ರಕ್ಷಣೆ ಮಾಡಿದ್ದು, ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಮಡಿವಾಳ ಪೊಲೀಸರಿಂದ ಬಂಡೆಪಾಳ್ಯ ಪೊಲೀಸರಿಗೆ ವರ್ಗಾಯಿಸಿದ್ದಾರೆ.

ಈ ನಡುವೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಮೂವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ, ಯುವಕ ಹಾಗೂ ಆರೋಪಿಯ ನಡುವೆ ಹಳೆ ವೈಷಮ್ಯವಿದ್ದು, ಇದೇ ಅಪಹರಣಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆಗಳು ಮುಂದುವರೆದಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here