ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಅಪೂರ್ಣವಾಗಿದೆ, ಹೆದ್ದಾರಿಯಲ್ಲಿ ಉಂಟಾಗುವ ಅಪಘಾತ, ಸಾವು ನೋವುಗಳನ್ನು ತಡೆಯಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು. ಮೈಸೂರು: ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಅಪೂರ್ಣವಾಗಿದೆ, ಹೆದ್ದಾರಿಯಲ್ಲಿ ಉಂಟಾಗುವ ಅಪಘಾತ, ಸಾವು ನೋವುಗಳನ್ನು ತಡೆಯಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದ್ದಾರಿಯಲ್ಲಿ ಸುಮಾರು20 ರಿಂದ 25 ಅಪಘಾತ ವಲಯಗಳು ಇವೆ. ಎಲ್ಲ ಕಡೆಗೆ ನಾನು ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು.
ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಹಲವಾರು ಕಾಮಗಾರಿಗಳು ಬಾಕಿ ಉಳಿದಿವೆ. ಸಿಸಿ ಕ್ಯಾಮರಾಗಳ ಅಳವಡಿಕೆ ಬಾಕಿ ಇದೆ. ಈಗಾಗಲೇ ಹೆದ್ದಾರಿ ಉದ್ಘಾಟನೆ ಆಗಿದೆ. ಬಾಕಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ತಂದು ಕೆಲಸ ಮಾಡಿಸುವುದು ಎನ್‍ಎಚ್‍ಎಐ ಅಧಿಕಾರಿಗಳ ಕೆಲಸ.ಸರ್ಕಾರದ ನಿಯಮಗಳ ಪ್ರಕಾರ ಪ್ರಸ್ತಾವನೆ, ಟೆಂಡರ್ ಮಾಡಿ ಕೆಲಸ ಮಾಡಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರನ್ನು ಕೇಳಿ ಕಾಮಗಾರಿ ಮಾಡಿಲ್ಲ. ಸಮಸ್ಯೆ ಆದಾಗ ಸರಿ ಮಾಡಿ ಅಂತ ನಮ್ಮನ್ನು ಕರೆಯುತ್ತಾರೆ ಎಂದರು.
ಇದನ್ನೂ ಓದಿ: ಆಗಸ್ಟ್ 1 ರಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಆಟೋ, ಬೈಕ್ ಸಂಚಾರಕ್ಕೆ ನಿರ್ಬಂಧ; 6 ತಿಂಗಳಲ್ಲಿ 132 ಮಂದಿ ಸಾವು!
ಬೆಂಗಳೂರಿನಿಂದ ಮೈಸೂರುವರೆಗಿನ 118.6 ಕಿಮೀ ವ್ಯಾಪ್ತಿಯಲ್ಲಿ 20ರಿಂದ 25 ಅಪಘಾತ ಸ್ಥಳಗಳನ್ನು ಗಮನಿಸಿದ್ದೇನೆ. NHAI ಪ್ರಾಯೋಗಿಕ ಆಧಾರದ ಮೇಲೆ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತು ಹಚ್ಚುವ ಕ್ಯಾಮೆರಾವನ್ನು ಸ್ಥಾಪಿಸಿದೆ ಅದು ಸಾಕಾಗುವುದಿಲ್ಲ. ಅಪಘಾತಗಳನ್ನು ತಡೆಗಟ್ಟಲು ಅವರು ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.
ಇತ್ತೀಚೆಗೆ ಮೂರು ದಿನಗಳ ಕಾಲ ಎಕ್ಸ್‌ಪ್ರೆಸ್‌ವೇ ಪರಿಶೀಲಿಸಿದ ತಜ್ಞರ ತಂಡವು ಸಮಸ್ಯೆಗಳ ಬಗ್ಗೆ ವೀಕ್ಷಣೆಗ ಮಾಡಿದ್ದು, ಶೀಘ್ರವೇ ವರದಿ ಸಲ್ಲಿಸಲಿದೆ. ವರದಿ ಆಧರಿಸಿ ಎನ್ ಎಚ್ ಎಐ ಕಾಮಗಾರಿ ಕೈಗೆತ್ತಿಕೊಳ್ಳಲಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ನಾವು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಲು NHAI ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದೇವೆ. ಒಂದು ವೇಳೆ ಅವರು ಅವಶ್ಯಕತೆ ಈಡೇರಿಸಲು ವಿಫಲವಾದರೆ ಅಥವಾ ದೊಡ್ಡ ಅಪಘಾತ ಸಂಭವಿಸಿದಲ್ಲಿ ನಿರ್ಲಕ್ಷ್ಯದ ಅಡಿಯಲ್ಲಿ ಅವರನ್ನು ಬಂಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೂ ಮುನ್ನವೇ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು, ಆದರೆ ಈಗ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶವಿರುವುದರಿಂದ ಎನ್‌ಎಚ್‌ಎಐ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದರು.