Home Uncategorized ಅಭಿಯಾನದಿಂದ ಅನಿಮಿಯಾ ಅಂತ್ಯಗೊಂಡೀತೆ…?

ಅಭಿಯಾನದಿಂದ ಅನಿಮಿಯಾ ಅಂತ್ಯಗೊಂಡೀತೆ…?

1
0
Advertisement
bengaluru

ರಕ್ತ ಪ್ರಾಣಿ ಪ್ರಪಂಚದ ಜೀವ ಸೆಲೆಯ ಮೂಲ ಆಧಾರ. ಜೀವವಾಹಿನಿಯಾಗಿ ಸರ್ವಾಂತರ್ಯಾಮಿಯಾಗಿ ದೇಹದೆಲ್ಲೆಡೆ ಇರುವ ಕೆಂಪು ದ್ರವ. ಇದಕ್ಕೆ ಜಾತಿ, ಮತ, ಬಣ್ಣ, ದೇಶ, ಭಾಷೆ, ಪ್ರಾಂತಗಳ ಸೋಂಕಿಲ್ಲ. ರಕ್ತಕ್ಕೆ ಕೆಂಪು ಬಣ್ಣ ನೀಡಿದ್ದೇ ಕೆಂಪು ರಕ್ತ ಕಣಗಳು. ಆಮ್ಲಜನಕವನ್ನು ಹಿಡಿದಿಟ್ಟುಕೊಳ್ಳುವ ಹಿಮೋಗ್ಲೋಬಿನ್ ಇರುವುದು ಕೆಂಪು ರಕ್ತ ಕಣದಲ್ಲೇ. ಈ ಕಣಕ್ಕೆ ಕೆಂಪು ಬಣ್ಣ ಕೊಟ್ಟದ್ದೂ ಇದೇ. ಕೆಂಪು ರಕ್ತ ಕಣದೊಳಗಿರುವ ಹಿಮೋಗ್ಲೋಬಿನ್ ಕಡಿಮೆ ಆದರೆ ವ್ಯಕ್ತಿ ರಕ್ತಹೀನತೆ ಅಥವಾ ಅನಿಮಿಯಾದಿಂದ ನರಳಬಹುದು. ಇದಕ್ಕೆ ಇಂತಹದೇ ಕಾರಣವೆಂದು ನಿಗದಿ ಇಲ್ಲ. ಕೆಂಪು ರಕ್ತ ಕಣಗಳು ಅಮರವಲ್ಲ. ಇವುಗಳ ಸರಾಸರಿ ಆಯುಷ್ಯ 120 ದಿನಗಳು.

ರಕ್ತ ಕಣಗಳನ್ನು ಉತ್ಪಾದಿಸುವ ಎಲುಬಿನ ಮಜ್ಜಾಲೆಯಲ್ಲಿ ನ್ಯೂನತೆಗಳಿದ್ದರೆ, ಕೆಂಪು ರಕ್ತ ಕಣಗಳ ತಯಾರಿಕೆಯಲ್ಲಿ ಅಗತ್ಯ ಕಚ್ಚಾ ವಸ್ತುಗಳಾದ ಬಿ ಮತ್ತು ಸಿ ಜೀವಸತ್ವಗಳು, ಲವಣಾಂಶಗಳು, ಕಬ್ಬಿಣಾಂಶ, ಪೋಷಕಾಂಶಗಳು ಆಹಾರದಲ್ಲೇ ಸಾಕಷ್ಟು ಸಿಗದೆ ಕೆಂಪು ರಕ್ತ ಕಣಗಳ ತಯಾರಿಕೆ ಕುಗ್ಗಬಹುದು. ಆಗ ಸದ್ದಿಲ್ಲದೆ ಅನಿಮಿಯಾ ಅಪ್ಪಿಕೊಳ್ಳುವುದು. ಕರ್ನಾಟಕದಲ್ಲಿ ಪೌಷ್ಟಿಕಾಂಶದ ಕೊರತೆಯ ಕಾರಣದಿಂದ ಉಂಟಾಗುವ ಅನಿಮಿಯಾವನ್ನು ನಿವಾರಣೆ ಮಾಡಲು ಸರಕಾರ ಆರಂಭಿಸಿರುವ ಅಭಿಯಾನ ಬಹಳಷ್ಟು ಪ್ರಚಾರವನ್ನು ಪಡೆದುಕೊಂಡಿದೆ.

ಸರಕಾರದ ಅಂಕಿಅಂಶಗಳೇ ಹೇಳುವಂತೆ ಶೇ.45ರಷ್ಟು ಮಹಿಳೆಯರು ಅನಿಮಿಯಾ ಬಾಹುಬಂಧನದಲ್ಲಿ ಬಂಧಿತರಾಗಿರುವರು ಎಂದಾದರೆ ಈ ನ್ಯೂನತೆ ಅದೆಷ್ಟು ವ್ಯಾಪಕವಾಗಿದೆ ಎಂದು ತಿಳಿದುಕೊಳ್ಳಬಹುದು. ಇದು ಒಂದೆಡೆ ಕಾಳಜಿ ವಹಿಸಬೇಕಾದ ವಿಷಯವೂ ಹೌದು. ಇನ್ನೊಂದೆಡೆ ನಾಚಿಕೆಯ ವಿಚಾರವೂ ಹೌದು. ಅನಿಮಿಯಾ ದೇಶದಾದ್ಯಂತ ಸರ್ವಾಂತರ್ಯಾಮಿಯಾಗಿರಲು ಮುಖ್ಯವಾಗಿ ಮೂರು ಅಂಶಗಳು ಕಾರಣ -ಅಜ್ಞಾನ, ಅಂಧಶ್ರದ್ಧೆ ಮತ್ತು ಆಹಾರ. 100ಕ್ಕೆ 70 ಮಂದಿ ದರಿದ್ರರಾಗಿರುವ ನಮ್ಮಲ್ಲಿ ಅನಿಮಿಯಾಕ್ಕೆ ಆಹಾರವೇ ಕಾರಣವಾಗಲು ಬಡತನದ ಭೂತ ಪ್ರಮುಖ ಪಾತ್ರ ವಹಿಸುವುದು.

ಅನಿಮಿಯಾದ ಲಕ್ಷಣಗಳು

bengaluru bengaluru

ಅನಿಮಿಯಾದಿಂದಾಗುವ ತೊಡಕು, ತೊಂದರೆಗಳು, ಚಿಹ್ನೆಗಳು, ಅನಿಮಿಯಾದ ತೀವ್ರತೆಯನ್ನಷ್ಟೇ ಅವಲಂಬಿಸಿರದೆ, ತ್ವರಿತಗತಿಯ ಬೆಳವಣಿಗೆಯ ಪ್ರಭಾವ ಪ್ರಮುಖ ಪಾತ್ರ ವಹಿಸುವುದು. ಅನಿಮಿಯಾ ಆರಂಭದಲ್ಲಿ ಸ್ವಲ್ಪ ನಿಶ್ಶಕ್ತಿ, ಆಯಾಸ ಬಿಟ್ಟು ಮತ್ತಾವ ತೊಂದರೆಗಳೂ ಇರುವುದಿಲ್ಲ. ಮುಖ ಸ್ವಲ್ಪ ಪೇಲವವಾಗಿರುವುದನ್ನು ಬಿಟ್ಟರೆ, ಇನ್ನಾವ ಗುರುತುಗಳೂ ಎದ್ದು ಕಾಣುವಂತಿರುವುದಿಲ್ಲ. ಹಿಮೋಗ್ಲೋಬಿನ್ ಪ್ರಮಾಣವೇ ದೇಹದಲ್ಲಿ ಕಡಿಮೆ ಆದಾಗ, ಅಂಗಾಂಗಗಳು ಆಮ್ಲಜನಕದ ಕೊರತೆಯಿಂದ ಬಳಲುತ್ತವೆ. ಹೀಗಾಗಿ ಮೆದುಳಿಗೆ ರಕ್ತ ಸಾಲದೆ ಕಣ್ಣಿಗೆ ಕತ್ತಲಿಟ್ಟಂತಾಗುತ್ತದೆ. ಕೈಕಾಲುಗಳು ಜುಂ ಜುಂ ಎನ್ನತೊಡಗುತ್ತವೆ.

ತೀವ್ರ ಅನಿಮಿಯಾದಲ್ಲಿ ಮುಖ, ಕೈಕಾಲ ಉಗುರು, ಮೈ ಚರ್ಮ ಎಲ್ಲ ಪೂರ್ತಿ ಬಿಳುಚಿಕೊಂಡಿರುತ್ತದೆ. ನಾಲಿಗೆಯಲ್ಲಿ ಹುಣ್ಣು ಸಾಮಾನ್ಯ. ಹಸಿವಿನ ಅಭಾವ, ಜೀರ್ಣವಾಗದಿರುವಿಕೆ, ಭೇದಿ ಮುಂತಾದ ಏರುಪೇರುಗಳು ಕಂಡುಬರುತ್ತವೆ. ಹೃದಯ ವೇಗವಾಗಿ, ಜೋರಾಗಿ ಬಡಿದುಕೊಳ್ಳುವುದು. ಕೊನೆಯ ಹಂತದಲ್ಲಿ ಹೃದಯ ಬಹಳಷ್ಟು ಹಿಗ್ಗಿ ಅದರ ಕ್ರಿಯೆ ಅಸ್ತವ್ಯಸ್ತಗೊಳ್ಳುತ್ತದೆ. ದಮ್ಮು, ಎದೆನೋವು, ಕೈಕಾಲು ಊತ, ನಿಶ್ಶಕ್ತಿ, ನಿರುತ್ಸಾಹ, ನಿರಾಸಕ್ತಿ ಇರುತ್ತದೆ. ಕೈಕಾಲ ಉಗುರುಗಳು ನಸುಗೆಂಪು ಬಣ್ಣ ನಶಿಸಿ ಚಪ್ಪಟೆಯಾಗುತ್ತವೆ. ಅನಿಮಿಯಾ ಗರಿಷ್ಠ ಮಟ್ಟ ಮುಟ್ಟಿದಾಗ ಉಗುರುಗಳು ಚಮಚದಂತೆ ಬಾಗುವವು.

ಗರ್ಭಿಣಿಯರ ಗಂಭೀರ ಸಮಸ್ಯೆ

ನಮ್ಮ ದೇಶದಲ್ಲಿ ಗರ್ಭಿಣಿಯರನ್ನು ಬಲಿ ತಗೆದುಕೊಳ್ಳುವುದರಲ್ಲಿ ಅನಿಮಿಯಾಕ್ಕೆ ಅಗ್ರಸ್ಥಾನ. ತಾಯಂದಿರ ಮರಣಕ್ಕೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಅನಿಮಿಯಾ ಹಲವು ಸಂದರ್ಭಗಳಲ್ಲಿ ಕಾರಣವಾಗುತ್ತದೆ. ಬಡತನ ಮತ್ತು ನಿರಕ್ಷರತೆ ಇವುಗಳನ್ನು ಹೊಡೆದೋಡಿಸಿದಾಗ ಬಹುಶಃ ಈ ಪೆಡಂಭೂತವನ್ನು ಓಡಿಸಬಹುದೇನೋ! ಪ್ರತಿಶತ 25-50 ಮಂದಿ ಗರ್ಭಿಣಿಯರು ಈ ರೋಗಕ್ಕೆ ಗುರಿಯಾಗುತ್ತಾರೆಂದು ಒಂದು ಅಂದಾಜು. ತಾಯಂದಿರ ಮರಣದ ಅಂಕಿಅಂಶಗಳನ್ನು ತೆಗೆದುಕೊಂಡರೆ 15-20 ಪ್ರಸಂಗಗಳಲ್ಲಿ ಅನಿಮಿಯಾವೇ ಕಾರಣ ಎಂದಾಗ ಗರ್ಭಿಣಿಯರಲ್ಲಿ ಅನಿಮಿಯಾ ಎಷ್ಟು ಗಂಭೀರ ಸಮಸ್ಯೆ ಎಂದು ಊಹಿಸಬಹುದಾಗಿದೆ !!

ಮನೆಯ ಮಂದಿಯೆಲ್ಲಾ ಉಂಡ ಬಳಿಕ ಉಳಿದದ್ದನ್ನು ಬಳಿದು ತಿನ್ನಬೇಕು ಎನ್ನುವ ಸಂಪ್ರದಾಯಸ್ಥ ಭಾರತೀಯ ನಾರಿ, ಜೊತೆಗೆ ಗರ್ಭಿಣಿಯರು ಒಳ್ಳೆಯ ಆಹಾರ ಸೇವಿಸಿದರೆ ಹೊಟ್ಟೆಯಲ್ಲಿರುವ ಮಗು ದಷ್ಟ ಪುಷ್ಟವಾಗಿ ಬೆಳೆದು ಪ್ರಸವಕ್ಕೆ ತೊಂದರೆ ಆಗುವುದೆಂಬ ಅನಗತ್ಯ ಭಯ ಬೇರೆ. ಹೇರಳವಾಗಿ ಹಸಿರು ಸೊಪ್ಪು, ತರಕಾರಿ, ಬೇಳೆಕಾಳು ತಿನ್ನದೆ ಇರುವ ಕಾರಣಕ್ಕಾಗಿ ಅನಿಮಿಯಾ ಕೇವಲ ಆರೋಗ್ಯ ಸಮಸ್ಯೆಯಾಗಿರದೆ, ಸಾಮಾಜಿಕ ಸಮಸ್ಯೆಯೂ ಆಗಿದೆ. ಸರಕಾರ ಉಚಿತವಾಗಿ ಹಂಚುವ ಕಬ್ಬಿಣದ ಅಂಶಗಳನ್ನೊಳಗೊಂಡ ಗುಳಿಗೆಗಳು ಮಕ್ಕಳ ಆಟಕ್ಕೆ ಗೋಲಿಗಳಾಗಿಯೋ, ಮಣ್ಣಿನ ಗೊಂಬೆಗಳ ಕಣ್ಣುಗಳಾಗಿಯೋ ಬಳಕೆ ಆಗುತ್ತವೆ. ಅನಿಮಿಯಾ ಉಳಿಯಲು ಬೆಳೆಯಲು ಹಾದಿ ಮಾಡುತ್ತವೆ.

ಯಾವುದೇ ಸರಕಾರದ ಸುತ್ತೋಲೆಯು ಲಿಂಗ ತಾರತಮ್ಯವನ್ನು ಕೊನೆಗೊಳಿಸಲಾರದು. ಅನಿಮಿಯಾ ಎಂಬುದು ಒಂದು ರೋಗಲಕ್ಷಣ. ಸಾಮಾಜಿಕ ರೋಗದ ದೈಹಿಕ ಲಕ್ಷಣವದು. ಅನಿಮಿಯಾ ಅಪ್ಪುಗೆಯಲ್ಲಿ ತತ್ತರಿಸುತ್ತಿರುವ ಮಹಿಳೆಯರು ಮಾತ್ರೆಗಾಗಿ ಅಂಗಲಾಚುತ್ತಿಲ್ಲ. ಬದಲಿಗೆ, ಲಿಂಗ ತಾರತಮ್ಯ ಇಲ್ಲದ ಸಮಾಜಕ್ಕಾಗಿ ಬೇಡುತ್ತಿದ್ದಾರೆ. ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದ ಅಧ್ಯಯನದ ಪ್ರಕಾರ, ‘ಭಾರತದಲ್ಲಿ ಕೌಟುಂಬಿಕ ದೈಹಿಕ ಹಿಂಸೆ ಮತ್ತು ಅನಿಮಿಯಾಗೆ ಕಾರಣವಾಗುವ ಪೋಷಕಾಂಶಗಳ ಕೊರತೆಯ ನಡುವೆ ನೇರ ಸಂಬಂಧವಿದೆ. ಕೌಟುಂಬಿಕ ಹಿಂಸಾಚಾರವು ಮಹಿಳೆಗೆ ತಾನು ಸಿದ್ಧಪಡಿಸುವ ಆಹಾರದ ವಿಧ ಮತ್ತು ಪ್ರಮಾಣದ ಆಯ್ಕೆ ಸೇರಿದಂತೆ ತನ್ನ ಕುಟುಂಬಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥಳನ್ನಾಗಿಸುತ್ತದೆ.’

ಅನಿಮಿಯಾ ಅಪಾಯಗಳು

ಅನಿಮಿಯಾದಿಂದ ಗರ್ಭಿಣಿಯರಲ್ಲಿ ಮಗುವಿನ ಬೆಳವಣಿಗೆ ಕುಂಠಿತವಾಗಿ ಗರ್ಭಪಾತ, ಅಕಾಲ ಪ್ರಸವ, ನಿರ್ಜೀವ ಜನನ, ಜನಿಸಿದೊಡನೆ ಮರಣ ಮುಂತಾದವುಗಳು ಆಗಬಹುದು. ಮಗು ಸೋಂಕಿಗೆ ಈಡಾಗುವ ಸಂಭವ ಸಹ ಹೆಚ್ಚು. ತಾಯಿಗೆ ಹೆರಿಗೆಯಲ್ಲಿ ಮುಕ್ಕಲಾಗದೇ ಆಯಾಸವಾಗಿ ಪ್ರಸವದಲ್ಲಿ ವಿಳಂಬವಾಗುತ್ತದೆ. ಪ್ರಸವದಲ್ಲಿ ಶಸ್ತ್ರ ಬಳಕೆಯ ಪ್ರಮೇಯ ಸಹ ಹೆಚ್ಚು. ಪ್ರಸವದ ನಂತರ ಅಧಿಕ ರಕ್ತಸ್ರಾವ, ಸುಸ್ತು, ಬಾಣಂತಿಗೆ ಸೋಂಕು, ಚೇತರಿಸಿಕೊಳ್ಳುವಲ್ಲಿ ವಿಳಂಬ, ಗರ್ಭಾಶಯ ಪ್ರಸವ ಪೂರ್ವ ಸ್ಥಿತಿಗೆ ಮರಳುವುದರಲ್ಲಿ ಅಡಚಣೆ ಇತ್ಯಾದಿ ಆಗುತ್ತದೆ. ಹೆರಿಗೆ ತ್ರಾಸು ತಾಳಲಾರದೆ ಹೆರಿಗೆಯ ಮುನ್ನವೇ ಗರ್ಭಿಣಿ ಅಸು ನೀಗಬಹುದು. ಪ್ರಸವವಾಯಿತೆಂದರೆ ಮಗುವಿನ ಮುಖ ನೋಡುವ ಮೊದಲೇ ಅವಳ ಪ್ರಾಣ ಹಾರಿ ಹೋಗಬಹುದು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಅನಿಮಿಯಾದಿಂದಾಗಿ ತಾಯಂದಿರ ಮರಣದ ಸಂಖ್ಯೆ ಜಾಗತಿಕವಾಗಿ 11.50 ಲಕ್ಷ ಇದೆ. ನೀತಿ ಆಯೋಗ ಹೇಳುವಂತೆ, ‘ಕಬ್ಬಿಣಾಂಶದ ಕೊರತೆಯ ಕಾರಣದಿಂದ ಉಂಟಾಗುವ ಅನಿಮಿಯಾದಿಂದ ದೈಹಿಕ ಆರೋಗ್ಯದ ಮೇಲೆ ಆಗುವ ನಷ್ಟದಷ್ಟೇ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಮೇಲೆ ಕೂಡ ವಿನಾಶಕಾರಿ ಪರಿಣಾಮ ಆಗುತ್ತಿದೆ. ಅಭಿವೃದ್ಧಿಶೀಲ ದೇಶಗಳಿಗೆ ಜಿಡಿಪಿಯಲ್ಲಿ ಶೇ.4.5ರಷ್ಟು ನಷ್ಟವನ್ನು ಅದು ಉಂಟು ಮಾಡುತ್ತಿದೆ. ಈ ಕಾರಣಕ್ಕೆ ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವ ಅನಿಮಿಯಾವನ್ನು ನಿರ್ಮೂಲ ಮಾಡುವ ಪಣ ತೊಟ್ಟಿರುವ ಸರಕಾರದ ಈ ಅಭಿಯಾನ ಸ್ವಾಗತಾರ್ಹ.

ಅಭಿಯಾನದಿಂದ ಸಾಧ್ಯವೇ?

ಅನಿಮಿಯಾದಿಂದ ಬಳಲುತ್ತಿರುವ ಮಹಿಳೆಗೆ ಕಬ್ಬಿಣಾಂಶ + ಪೋಲಿಕ್ ಆ್ಯಸಿಡ್ ಮಾತ್ರೆಗಳ ಸರಳ ಚಿಕಿತ್ಸೆ ಅವಶ್ಯಕತೆ ಇದೆ. ಈ ಔಷಧಿ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಪಕ್ಕಟೆಯಾಗಿ ಸಿಗುತ್ತದೆ. ಆರೋಗ್ಯ ಇಲಾಖೆಯ ಕಾರ್ಯಕರ್ತರು ಮನೆ ಭೇಟಿ ವೇಳೆ ಹಂಚುತ್ತಾರೆ. ಆದರೆ, ಜನ ಅವನ್ನು ಸೇವಿಸಲು ಹಿಂಜರಿಯುತ್ತಿರುವುದೊಂದು ದುರಂತ ! ನಮ್ಮ ದೇಶದಲ್ಲಿ ಶೇ.75ರಷ್ಟು ಜನರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ದುರದೃಷ್ಟವೆಂದರೆ, ಈ ಸರಳ, ಕಡಿಮೆ ಖರ್ಚಿನ ಚಿಕಿತ್ಸೆ ಸಿಗದೆ ಇರುವುದು.

ಈ ಸರಳ ಔಷಧಿ ತಯಾರಿಸಲು ಬಹುತೇಕ ಔಷಧಿ ತಯಾರಿಕಾ ಕಂಪೆನಿಯವರಿಗೆ ಆಸಕ್ತಿಯಿಲ್ಲ. ಕಾರಣ ಇದು ಲಾಭದಾಯಕ ಆಗಿರದೆ ಇರುವುದು. ಅವರು ಅನವಶ್ಯಕ ವಸ್ತುಗಳನ್ನು ಸೇರಿಸಿ ದುಬಾರಿ ಔಷಧಿಗಳನ್ನು ತಯಾರಿಸುವಲ್ಲಿ ಒಲವು ಹೊಂದಿದ್ದು ಬಡ ಭಾರತೀಯನಿಗೆ ಹೊರೆಯಾಗುತ್ತದೆ. ಹೀಗಾಗಿ ಸಂಪೂರ್ಣ ಚಿಕಿತ್ಸೆ ಪಡೆಯಲು ವಿಫಲರಾಗುವರು. ಔಷಧಿ ಕಂಪೆನಿಗಳ ಪ್ರತಿನಿಧಿಗಳ ಬಣ್ಣದ ಮಾತಿಗೆ ಮರುಳಾದಲ್ಲಿ ಬಡ ಭಾರತೀಯರ ಕಿಸೆ ಖಾಲಿಯಾಗುತ್ತದೆ. ಅನಿಮಿಯಾ ಹಾಗೆಯೇ ಉಳಿಯುತ್ತದೆ. ಸೇವಿಸುವ ಔಷಧಿಗಳ ಬಗ್ಗೆ ಗ್ರಾಹಕರಿಗೆ ಸರಿಯಾದ ವೈಜ್ಞಾನಿಕ ಮಾಹಿತಿ ಇರಬೇಕು.

ಲಿಂಗ ಸಮಾನತೆಯೆಡೆ ಕಿಂಚಿತ್ತೂ ಗೌರವವಿಲ್ಲದ ಪುರುಷ ಪ್ರಧಾನ ಸಮಾಜ ನಮ್ಮದು. ಹೀಗಾಗಿ ಪೌಷ್ಟಿಕಾಂಶದ ಕೊರತೆಯಿಂದ ಬರುವ ಅನಿಮಿಯಾ ಬರೀ ವೈದ್ಯಕೀಯ ಸಮಸ್ಯೆಯಲ್ಲ. ಅದೊಂದು ದೊಡ್ಡ ಸಾಮಾಜಿಕ ಸಮಸ್ಯೆಯೂ ಹೌದು. ಆದ್ದರಿಂದ ರಾಜ್ಯ ಸರಕಾರದ ಈ ಅಭಿಯಾನವು ಯಶಸ್ವಿಯಾಗಬೇಕಾದರೆ ಸಾಮಾಜಿಕ ಸಮಸ್ಯೆಯತ್ತಲೂ ಗಮನಹರಿಸಬೇಕು. ಇದಕ್ಕಾಗಿ ಲಭ್ಯವಿರುವ ಎಲ್ಲಾ ಮಾಧ್ಯಮಗಳನ್ನು ಬಳಸಿಕೊಂಡು ಆರೋಗ್ಯ ಶಿಕ್ಷಣ ನೀಡಿ, ಜನಜಾಗೃತಿ ಉಂಟುಮಾಡಬೇಕು. ಆಗ ಮಾತ್ರ ಸರಕಾರದ ಈ ಅಭಿಯಾನದಿಂದ ಅನಿಮಿಯಾ ಅಂತ್ಯಗೊಂಡೀತು!


bengaluru

LEAVE A REPLY

Please enter your comment!
Please enter your name here