ಉಡುಪಿ ಜಿಲ್ಲೆಯ ಆರೋಗ್ಯ ಸೂಚ್ಯಂಕದಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಗಳೂರು: ಉಡುಪಿ ಜಿಲ್ಲೆಯ ಆರೋಗ್ಯ ಸೂಚ್ಯಂಕದಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಉಡುಪಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ತಾಯಂದಿರು ಮತ್ತು ಮಕ್ಕಳ ಮರಣ ಪ್ರಮಾಣ ಹೆಚ್ಚಾಗುತ್ತಿರುವುದು ಆರೋಗ್ಯ ಸೂಚ್ಯಂಕ ಇಳಿಮುಖವಾಗಲು ಕಾರಣ ಎಂದರು.
ಇದನ್ನು ಓದಿ: ಉಡುಪಿ: ಕಡಲ್ಕೊರೆತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ!
2015ರಲ್ಲಿ ಆರೋಗ್ಯ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದಿದ್ದ ಉಡುಪಿ, ಈಗ 18ನೇ ಸ್ಥಾನಕ್ಕೆ ಕುಸಿದಿದೆ. ತಾಯಿ, ಮಕ್ಕಳ ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿರುವುದೇ ಇದಕ್ಕೆ ಕಾರಣ. ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆ ಮತ್ತೆ ಉನ್ನತ ಸ್ಥಾನ ಪಡೆಯಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು ಮತ್ತು ಪರಿಸ್ಥಿತಿಯನ್ನು ಸಾಕಷ್ಟು ಸುಧಾರಿಸದಿದ್ದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಕಚೇರಿಗಳಲ್ಲಿ ಮಾತ್ರ ಕಾರ್ಯನಿರ್ವಹಿಸದೆ ಸ್ಥಳದಲ್ಲಿಯೇ ನಿಯಮಿತವಾಗಿ ತಪಾಸಣೆ ನಡೆಸುವ ಮೂಲಕ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಬೇಕು ಎಂದು ಸಿದ್ದರಾಮಯ್ಯ ಆದೇಶಿಸಿದರು.
ಸಭೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಉಪಸ್ಥಿತರಿದ್ದರು.