Home Uncategorized ಉತ್ಸವಕ್ಕೆ ಕೋಟಿ ಖರ್ಚು ಮಾಡುತ್ತೀರಿ: ಶಾಲಾಮಕ್ಕಳಿಗೆ 2 ಜೊತೆ ಸಮವಸ್ತ್ರ ಕೊಡಲು ಕಾಸಿಲ್ಲವೇ? ಸರ್ಕಾರಕ್ಕೆ ನಾಚಿಕೆಯಿಲ್ಲವೇ?...

ಉತ್ಸವಕ್ಕೆ ಕೋಟಿ ಖರ್ಚು ಮಾಡುತ್ತೀರಿ: ಶಾಲಾಮಕ್ಕಳಿಗೆ 2 ಜೊತೆ ಸಮವಸ್ತ್ರ ಕೊಡಲು ಕಾಸಿಲ್ಲವೇ? ಸರ್ಕಾರಕ್ಕೆ ನಾಚಿಕೆಯಿಲ್ಲವೇ? ಹೈಕೋರ್ಟ್ ಛೀಮಾರಿ  

22
0

ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂಬ ಆದೇಶ ಪಾಲಿಸದ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ ಕಿಡಿಕಾರಿದೆ. ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂಬ ಆದೇಶ ಪಾಲಿಸದ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ ಕಿಡಿಕಾರಿದೆ.

ಸರ್ಕಾರಿ ಶಾಲೆಗಳ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಮತ್ತು ಶೂ ಒದಗಿಸಲು ಆಗದ ರಾಜ್ಯ ಸರ್ಕಾರಕ್ಕೆ ಉತ್ಸವಗಳನ್ನು ನಡೆಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಮನಸ್ಸಿದೆ. ಆದರೆ, ಮಕ್ಕಳ ಹಕ್ಕು, ಶಿಕ್ಷಣಗಳ ವಿಚಾರದಲ್ಲಿ ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿರ್ವಹಿಸಲು ಮಾತ್ರ ಆಗುತ್ತಿಲ್ಲ. ಅಧಿಕಾರಿಗಳಿಗಂತೂ ಮಾನ ಮರ್ಯಾದೆ, ಆತ್ಮಸಾಕ್ಷಿ ಯಾವುದೂ ಇಲ್ಲವಾಗಿದೆ. ಸರ್ಕಾರಿ ಶಾಲೆಗಳ ಮಕ್ಕಳ ಬಗ್ಗೆ ಅವರಲ್ಲಿ ಕಿಂಚಿತ್‌ ಮಾನವೀಯತೆಯೂ ಉಳಿದಿಲ್ಲ. ಈಗಲಾದರೂ ಕಣ್ಣು ತೆರೆದು ಸಮವಸ್ತ್ರ ಒದಗಿಸಲಿ ಎಂದು ಉಚ್ಚ ನ್ಯಾಯಾಲಯ ಛೀಮಾರಿ ಹಾಕಿದೆ.

ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲುಚೀಲಗಳನ್ನು ನೀಡಬೇಕು ಎಂದು 2018ರ ಆಗಸ್ಟ್‌ನಲ್ಲಿ ಹೈಕೋರ್ಟ್ ಹೊರಡಿಸಿರುವ ಆದೇಶ ಪಾಲನೆಯಾಗಿಲ್ಲ ಎಂದು ಆರೋಪಿಸಿ ಕೊಪ್ಪಳ ಜಿಲ್ಲೆಯ ಮಾಸ್ಟರ್ ಮಂಜುನಾಥ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರ ಸಲ್ಲಿಸಿದ ಪ್ರಮಾಣ ಪತ್ರದಲ್ಲಿನ ಲೋಪವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಸರಿಯಾದ ರೀತಿಯಲ್ಲಿ ಸಮವಸ್ತ್ರವನ್ನು ಯಾಕೆ ನೀಡಿಲ್ಲ? ಸಮವಸ್ತ್ರ, ಶೂ, ಕಾಲುಚೀಲ ವಿತರಣೆ ಹೊಣೆ ಹೊತ್ತಿರುವ ಅಧಿಕಾರಿ ಯಾರು ಎಂಬುದನ್ನು ತಿಳಿಸಿ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿ ಮಾಡಲಾಗುತ್ತದೆ ಎಂದು ಸರ್ಕಾರಿ ವಕೀಲರಿಗೆ ತಾಕೀತು ಮಾಡಿದರು.

ಎರಡು ಜೊತೆ ಸಮವಸ್ತ್ರಕ್ಕೆ ಹಣ ಕಳುಹಿಸಿರುವುದಾಗಿ ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ. ಆದರೆ, ದಾಖಲೆಗಳನ್ನು ನೋಡಿದರೆ ಒಂದು ಜೊತೆಗೆ ಮಾತ್ರವೇ ಹಣ ಒದಗಿಸಿರುವುದು ಕಾಣುತ್ತಿದೆ. ಕೊಟ್ಟಿರುವ ಸಮವಸ್ತ್ರದಲ್ಲೂ ಮೇಲಿನದು ಇದ್ದರೆ ಕೆಳಗಿನದು ಇರುವುದಿಲ್ಲ. ಒಂದು ಕಾಲುಚೀಲ ಮತ್ತು ಒಂದು ಶೂಗಷ್ಟೇ ಹಣ ಕಳುಹಿಸಿರಬೇಕು! ಫಲಾನುಭವಿ ಮಕ್ಕಳಿಗೆ ದಕ್ಕಬೇಕಾದ ಸಮವಸ್ತ್ರ, ಶೂ-ಕಾಲುಚೀಲಗಳು ದಕ್ಕಿವೆಯೇ ಎಂಬುದು ಆ ದೇವರಿಗೆ ಮಾತ್ರವೇ ಗೊತ್ತು ಎಂದು ವ್ಯಂಗ್ಯವಾಡಿದರು.

ಮಕ್ಕಳ ಶೈಕ್ಷಣಿಕ ಬದುಕನ್ನು ಹೀಗೆ ಮಾಡಿದರೆ ಏನು ಕತೆ? ಸಮವಸ್ತ್ರ ಕೊಡುವುದಾದರೆ ಸೂಕ್ತ ರೀತಿಯಲ್ಲಿ ಕೊಡಿ. ಇಲ್ಲವಾದರೆ ಬೇಡವೇ ಬೇಡ. ಪೂರ್ತಿಯಾಗಿ ಸಾಯಿಸಿಬಿಡಿ. ಅರ್ಧಂಬರ್ಧ ಸಾಯಿಸಬೇಡಿ. ಮಕ್ಕಳ ಮನಸ್ಸು ಒಮ್ಮೆ ಹಾಳಾದರೆ ಜೀವನಪೂರ್ತಿ ಆ ನೋವು ಅವರನ್ನು ಕಾಡುವುದಿಲ್ಲವೇ? ಅಧಿಕಾರಿಗಳಿಗೆ ಸರ್ಕಾರಿ ಶಾಲಾ ಮಕ್ಕಳ ಬಗ್ಗೆ ಮಾನವೀಯತೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

LEAVE A REPLY

Please enter your comment!
Please enter your name here