2013ರಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಎಂಎಲ್‌ಸಿ ತೇಜಸ್ವಿನಿ ಗೌಡ ಅವರು ಬುಧವಾರ ಒತ್ತಾಯಿಸಿದರು. ಬೆಂಗಳೂರು: 2013ರಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಎಂಎಲ್‌ಸಿ ತೇಜಸ್ವಿನಿ ಗೌಡ ಅವರು ಬುಧವಾರ ಒತ್ತಾಯಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಗರಣಗಳು ಹಾಗೂ ಅಕ್ರಮಗಳ ಕುರಿತು ಮಾತ್ರವೇ ತನಿಖೆಗೆ ಆದೇಶಿಸುತ್ತಿದೆ. ಅಕ್ರಮಗಳ ಕುರಿತು ಸರ್ಕಾರ ತನಿಖೆಗೆ ಆದೇಶಿಸುತ್ತಿರುವುದನ್ನು ಸ್ವಾಗತಿಸುತ್ತೇನೆ. ಆದರೆ, 2013ರಿಂದ ಆಡಳಿತ ನಡೆಸಿದ ಎಲ್ಲಾ ಸರ್ಕಾರದ ಹಗರಣಗಳ ಕುರಿತು ಸರ್ಕಾರ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ಶೇ.40 ಕಮಿಷನ್ ಸರ್ಕಾರ ಎಂದು ಹೇಳುವ ಮೂಲಕ ಕಾಂಗ್ರೆಸ್ ಜನರ ಹಾದಿಯನ್ನು ತಪ್ಪಿಸುತ್ತಿದೆ. ಇದು ಸಂಪೂರ್ಣ ಆಧಾರರಹಿತವಾಗಿದೆ. ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುತ್ತಿರುವುದೇ ಆದರೆ, ಸರ್ಕಾರವು 2013 ರಿಂದ ಕೇಳಿಬಂದ ಎಲ್ಲಾ ಆರೋಪಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ರಾಜ್ಯಪಾಲರ ಭಾಷಣವು ಅಸ್ಪಷ್ಟವಾಗಿದ್ದು, ನಿರ್ದೇಶನದ ಕೊರತೆಯಿದೆ ಎಂದು ಹೇಳಿದರು.
ಬಳಿಕ ಅನ್ನ ಭಾಗ್ಯ ಯೋಜನೆ ಅನುಷ್ಠಾನಕ್ಕೆ ಅಕ್ಕಿ ನೀಡದ ಬಿಜೆಪಿ ವಿರುದ್ಧ ಕಾಂಗ್ರೆಸ್ ಎಂಎಲ್‌ಸಿಗಳಾದ ಯುಬಿ ವೆಂಕಟೇಶ್ ಮತ್ತು ನಾಗರಾಜು ಅವರು ವಾಗ್ದಾಳಿ ನಡೆಸಿದರು.
ಬಿಜೆಪಿ ನೇತೃತ್ವದ ಕೇಂದ್ರವು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸುತ್ತಿದೆ ಎಂದು ವೆಂಕಟೇಶ್ ಆರೋಪಿಸಿದರು. ಈ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಮೌನತಾಳಿದ್ದಾರೆಂದೂ ವಾಗ್ದಾಳಿ ನಡೆಸಿದರು.