Home Uncategorized ಕಲ್ಲಂಗಡಿ ಹಣ್ಣಿಗೆ ಶಿಲೀಂಧ್ರ ಬಾಧೆ

ಕಲ್ಲಂಗಡಿ ಹಣ್ಣಿಗೆ ಶಿಲೀಂಧ್ರ ಬಾಧೆ

3
0
Advertisement
bengaluru

ಕುಂದಾಪುರ: ಕಳೆದ ನಾಲ್ಕೈದು ವರ್ಷಗಳಿಂದ ಬೈಂದೂರು, ಕುಂದಾಪುರ ತಾಲೂಕಿನಲ್ಲಿ ಕಲ್ಲಂಗಡಿ ಹಣ್ಣಿನ ಬೆಳೆಗಾರರಿಗೆ ಒಂದಿಲ್ಲೊಂದು ಸಮಸ್ಯೆ ಕಾಡುತ್ತಿದೆ. ಕೊರೋನ ಸಮಯದಲ್ಲಿ ಬೆಳೆ ಸಾಗಾಟ, ಸೂಕ್ತ ಮಾರುಕಟ್ಟೆಯ ಕೊರತೆಯಿತ್ತು. ನಂತರದ ವರ್ಷದಲ್ಲಿ ಕೀಟಬಾಧೆ, ನುಸಿಕಾಟ, ಎಲೆಚುಕ್ಕಿ ರೋಗ ಮೊದಲಾದವುಗಳು ಬೆಳೆಗೆ ಮಾರಕವಾಗಿದ್ದು, ಈ ವರ್ಷದಲ್ಲಿ ಶಿಲೀಂಧ್ರ ಬಾಧೆ ಕಲ್ಲಂಗಡಿಯ ನಿರೀಕ್ಷಿತ ಇಳುವರಿಗೆ ಅಡ್ಡಿಯಾಗುತ್ತಿದೆ.

ಇತ್ತೀಚಿನ ಕೆಲವು ವರ್ಷಗಳಿಂದ ಕಲ್ಲಂಗಡಿ ಬೆಳೆಗಾರರಿಗೆ ಒಂದಷ್ಟು ಅಡ್ಡಿ ಆತಂಕ ತಪ್ಪಿದ್ದಲ್ಲ. ಕಳೆದ ವರ್ಷದಂತೆ ಈ ಬಾರಿಯೂ ಕೀಟಬಾಧೆ ಕಾಣಿಸಿಕೊಂಡಿದ್ದು, ಇದರಿಂದ ಗಿಡದ ಎಲೆಗಳು ಬಾಡುತ್ತಿವೆ. ಕಾಯಿಗಳ ಬೆಳವಣಿಗೆ ಆಗದೆ ಇಳುವರಿ ಕುಸಿತಕ್ಕೂ ಕಾರಣವಾಗುತ್ತಿದೆ ಎನ್ನುವ ಆತಂಕ ಬೈಂದೂರು ಭಾಗದ ಕಲ್ಲಂಗಡಿ ಬೆಳೆಗಾರರದ್ದಾಗಿದೆ.

ಜನವರಿ ಆರಂಭದಲ್ಲಿ ಬಂದ ಅಕಾಲಿಕ ಮಳೆಯಿಂದ ಸಾಕಷ್ಟು ಕಲ್ಲಂಗಡಿ ಹಣ್ಣಿನ ಮಿಡಿಗಳು(ಸಣ್ಣ ಕಾಯಿ) ನಾಶ ಆಗಿತ್ತು. ಒಂದಷ್ಟು ಜನ ತಮ್ಮ ಸ್ವಂತ ಭೂಮಿಯಲ್ಲಿ ಬೆಳೆದರೆ ಮತ್ತೆ ಕೆಲವರು ಎಕರೆಗಟ್ಟಲೆ ಭೂಮಿಯನ್ನು ಗೇಣಿಗೆ ಪಡೆದು ಅದರಲ್ಲಿ ಕಲ್ಲಂಗಡಿ ಬೆಳೆಯುತ್ತಾರೆ. ಬಿರು ಬೇಸಿಗೆ ಪ್ರಾರಂಭಗೊಂಡಿರುವುದರಿಂದ ಕಲ್ಲಂಗಡಿ ಹಣ್ಣಿಗೆ ಸಹಜವಾಗಿ ಬೇಡಿಕೆ ಇರುತ್ತದೆ.

ಅಧಿಕಾರಿ, ವಿಜ್ಞಾನಿಗಳ ಭೇಟಿ: ಕಲ್ಲಂಗಡಿ ಬೆಳೆಗಾರರ ಸಮಸ್ಯೆ ಅರಿತು ಅಗತ್ಯ ಕ್ರಮ ವಹಿಸಲು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ರೇವಣ್ಣ ರೇವಣ್ಣನವರ್, ಚೈತನ್ಯ ಎಚ್.ಎಸ್., ಡಾ.ಮೋಹನ್‌ಕುಮಾರ್, ಕುಂದಾಪುರ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನಿಧೀಶ್ ಕೆ.ಜೆ., ಬೈಂದೂರು ಸಹಾಯಕ ತೋಟಗಾರಿಕಾ ಅಧಿಕಾರಿ ಪ್ರವೀಣ್ ಗದ್ದೆಗಳಿಗೆ ಭೇಟಿ ನೀಡಿದ್ದರು.

bengaluru bengaluru

ವಿಜ್ಞಾನಿಗಳು ಏನು ಹೇಳುತ್ತಾರೆ..?: ಹೈಬ್ರೀಡ್ ತಳಿಗಳಿಗೆ ಹೆಚ್ಚು ಗೊಬ್ಬರ ಹಾಕಲಾಗುತ್ತದೆ. ಹಾಗೆಯೇ ಬೆಳೆಗಾರರು ಗಿಡಗಳಿಗೆ ನೀರು ಹೆಚ್ಚು ನೀಡುತ್ತಾರೆ. ಇದರಿಂದ ಕಾಂಡ ಸೋರುವಿಕೆ, ಬೆಂಕಿ ರೋಗ ಹಾಗೂ ಸರ್ಕೋಸ್ಪೊರಾ ಶಿಲೀಂಧ್ರ ಬಾಧೆ ತಗಲುತ್ತದೆ. ಈ ಕಾರಣಕ್ಕೆ ಕಾಂಡದ ಭಾಗ ಕಂದುಬಣ್ಣಕ್ಕೆ ತಿರುಗಿ ಮೇಣದ ಮಾದರಿಯ ದ್ರವದ ಅಂಶ ಹೊರಕ್ಕೆ ಬರುತ್ತದೆ. ಇದು ಕೊನೆ ಹಂತದಲ್ಲಿ ಎಲೆ ಮತ್ತು ಕಾಯಿಗಳ ಮೇಲೂ ಕಂಡುಬರುತ್ತವೆ. ಇದರಿಂದ ಕಲ್ಲಂಗಡಿ ಸಣ್ಣ ಕಾಯಿ ಕೊಳೆಯುತ್ತದೆ.

ಕಲ್ಲಂಗಡಿ ಗಿಡ ಸೂಕ್ಷ್ಮವಾಗಿದ್ದು, ಗೊಬ್ಬರದ ಬಳಕೆ, ಹೆಚ್ಚು ನೀರು ನೀಡುವ ಕಾರಣ ಶಿಲೀಂಧ್ರ ಹರಡುವಿಕೆ ಜಾಸ್ತಿಯಾಗುತ್ತದೆ. ಹಟ್ಟಿ ಗೊಬ್ಬರದ ಜೊತೆ ಉಪಯುಕ್ತ ಶಿಲೀಂಧ್ರ(ಟ್ರಿಕೋಡರ್ಮಾ) ಬಳಕೆ, ಪ್ರಾರಂಭಿಕ ಹಂತದಲ್ಲಿ ಅಗತ್ಯ ಸಿಂಪಡಣೆ, ನೀರು ಹದವಾಗಿ ನೀಡುವ ಮೂಲಕ ಮುಂಜಾಗ್ರತಾ ಕ್ರಮ ವಹಿಸಬಹುದು. ಕಟಾವ್‌ಗೆ ಬಂದ ಸಂದರ್ಭ ಸಿಂಪಡನೆ ಮಾಡುವುದು ಅನಗತ್ಯ.

ಅಲ್ಲದೆ ಕರಾವಳಿ ಭೂಮಿಯ ಮಣ್ಣಿನಲ್ಲಿ ಎಸಿಡಿಕ್ ಅಂಶವಿದ್ದು, ಅದನ್ನು ತಡೆಯಲು ಕೃಷಿ ಸುಣ್ಣ ಬಳಕೆ ಮಾಡಬೇಕು. ಮೂರು ವರ್ಷಗಳ ಅವಧಿಗೆ ಬೆಳೆ ಬದಲಾವಣೆ ಅಗತ್ಯ. ಇಲ್ಲವಾದಲ್ಲಿ ಮಣ್ಣಿನ ಫಲವತ್ತತೆ ಮೇಲೆ ಪರಿಣಾಮ ಬೀರಿ ಇಂತಹ ಸಮಸ್ಯೆಗಳಾಗುತ್ತದೆ. ರೈತರು, ಬೆಳೆಗಾರರು ಇಲಾಖೆಗಳ ಮಾಹಿತಿ ಪಡೆದು ವೈಜ್ಞಾನಿಕ ಮಾದರಿ ಅಳವಡಿಸಿಕೊಳ್ಳಬೇಕು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಬೈಂದೂರಿನಲ್ಲಿ ಅತೀ ಹೆಚ್ಚು ಕಲ್ಲಂಗಡಿ ಬೆಳೆ

ಉಡುಪಿ ಜಿಲ್ಲೆಯಲ್ಲಿ ಬೈಂದೂರು ಭಾಗದಲ್ಲಿ ಹೆಚ್ಚಾಗಿ ಕಲ್ಲಂಗಡಿ ಬೆಳೆಯುತ್ತಾರೆ. ಸುಮಾರು 60 ದಿನಗಳ ಅಂದರೆ ಎರಡು ತಿಂಗಳ ಬೆಳೆಯಿದು. ಬೈಂದೂರು ಹೋಬಳಿಯ ನಾಗೂರು, ಕಿರಿಮಂಜೇಶ್ವರ, ಉಪ್ಪುಂದ, ನಾವುಂದ, ನಾಯ್ಕನಕಟ್ಟೆ, ಬಿಜೂರು, ಕೆರ್ಗಾಲು, ನಂದನವನ ಆಸುಪಾಸಿನ ಗ್ರಾಮಗಳಲ್ಲಿ ಹಾಗೆ ಬ್ರಹ್ಮಾವರ ಹೋಬಳಿ ವ್ಯಾಪ್ತಿಯಲ್ಲಿ ಕೋಟ, ಗಿಳಿಯಾರು, ಕೊಕ್ಕರ್ಣೆ, ಚಾಂತಾರು ಪ್ರದೇಶದಲ್ಲಿ ಬೆಳೆಯುವ ಕಲ್ಲಂಗಡಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಜಿಲ್ಲೆಯಲ್ಲಿ ಬೆಳೆದ ಕಲ್ಲಂಗಡಿ ಹಣ್ಣು ಹೆಚ್ಚಾಗಿ ಕೇರಳಕ್ಕೆ ಸಾಗಾಟವಾಗುತ್ತದೆ. ಅಲ್ಲಿ ಬೇಸಿಗೆಯ ಬಾಯಾರಿಕೆ ತಣಿಸುವ ಕೆಂಪು ಕೆಂಪು ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಉಳಿದಂತೆ ಜಿಲ್ಲೆ ಹಾಗೂ ಹೊರ ಜಿಲ್ಲೆ ಸಹಿತ ಸ್ಥಳೀಯ ಮಾರುಕಟ್ಟೆಯಲ್ಲೂ ಬೇಡಿಕೆಯಿದೆ. ನಾಮಧಾರಿ ತಳಿ, ಮೆಲೋಡಿ ತಳಿ ಈಗ ಹೆಚ್ಚು ಬೇಡಿಕೆಯಲ್ಲಿರುವ ಹಣ್ಣುಗಳ ತಳಿಗಳು. ಜಿಲ್ಲೆಯಲ್ಲಿ ಅಂದಾಜು 120 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ಬೆಳೆಯಲಾಗುತ್ತದೆ. ಅದರಲ್ಲೂ ಬೈಂದೂರು ಭಾಗದಲ್ಲೇ ಸುಮಾರು 100 ಎಕರೆಯಲ್ಲಿ ಇದನ್ನು ಬೆಳೆಯಲಾಗುತ್ತದೆ. ಪ್ರಸಕ್ತ ಕಲ್ಲಂಗಡಿ ಕಟಾವ್‌ಗೆ ಬರುವ ಸಮಯವಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ ಎನ್ನುತ್ತಾರೆ ಬೆಳೆಗಾರರು.

ಕಲ್ಲಂಗಡಿ ಬೆಳೆಯಲ್ಲಿ ಕಂಡುಬಂದ ಸಮಸ್ಯೆ ಬಗ್ಗೆ ತಿಳಿಯಲು ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಸರ್ಕೋಸ್ಪೊರಾ, ಗಮ್ಮಿ ಸ್ಟೆಮಬ್ಲೈಟ್ ಎಂಬ ಶಿಲೀಂಧ್ರಗಳಿಂದ ಇಂತಹ ಬಾಧೆ ಕಂಡುಬಂದಿದೆ. ಅಲ್ಲದೆ ಎಲೆ ತಿನ್ನುವ ಕೀಟಗಳ ಉಪಟಳವಿರುವುದು ತಿಳಿದಿದೆ. ಇದನ್ನು ತಡೆಗಟ್ಟಲು ಮುಂಜಾಗೃತಾ ಕ್ರಮಗಳು ಕೂಡ ಇವೆ. ಕಲ್ಲಂಗಡಿ ಬೆಳೆಗಾರರು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಸಿದಲ್ಲಿ ಅಗತ್ಯ ಮಾಹಿತಿ ನೀಡುತ್ತೇವೆ. ಇದರಿಂದ ಉತ್ತಮ ಬೆಳೆ ಪಡೆಯಲು ಸಾಧ್ಯ.

 -ಡಾ.ರೇವಣ್ಣ ರೇವಣ್ಣನವರ್, ಕೀಟ ಶಾಸ್ತ್ರಜ್ಞ, ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ.

ಕಲ್ಲಂಗಡಿ ಬಳ್ಳಿಯ ಎಲೆ ಬಾಡುವಿಕೆ ಬಗ್ಗೆ ಮಾಹಿತಿ ಬಂದಾಗ ಬ್ರಹ್ಮಾವರದ ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ. ತಾಂತ್ರಿಕ ವಿಧಾನ ಅರಿತು ವೈಜ್ಞಾನಿಕ ಮಾದರಿಯಲ್ಲಿ ಬೆಳೆಗಾರರು ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

-ನಿಧೀಶ್ ಕೆ.ಜೆ., ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ, ಕುಂದಾಪುರ

ಕಳೆದ 15 ವರ್ಷಗಳಿಂದ ಕಲ್ಲಂಗಡಿ ಬೆಳೆ ಬೆಳೆಯುತ್ತಿದ್ದೇನೆ. ನಾಲ್ಕೈದು ವರ್ಷದಿಂದೀಚೆಗೆ ಕಲ್ಲಂಗಡಿ ಬೆಳೆಗೆ ಕೀಟಬಾಧೆ, ಬೇರೆಬೇರೆ ರೋಗ, ಮಾರುಕಟ್ಟೆ ಕೊರತೆ, ಉತ್ತಮ ಬೆಲೆ ಲಭಿಸದೆ ನಿರೀಕ್ಷೆಯ ಲಾಭ ಸಿಗುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಿದೆ. ಸಮಸ್ಯೆ ಪರಿಹಾರಕ್ಕೆ ಇಲಾಖೆ ಹಾಗೂ ಸಂಶೋಧಕ ವಿಜ್ಞಾನಿಗಳು ಸೂಕ್ತ ಸಲಹೆ ನೀಡಿ ಅಗತ್ಯ ಮಾಹಿತಿ ನೀಡಿದರೆ ನಾವು ಅದನ್ನು ಅಳವಡಿಸಿಕೊಂಡು ಕಲ್ಲಂಗಡಿ ಬೆಳೆಯಲು ಅನುಕೂಲವಾಗುತ್ತದೆ. ಬೆಳೆಗಾರರು ಬೆಳೆಯಿಂದ ವಿಮುಖರಾಗದಂತೆ ಆಸಕ್ತಿ ಹೆಚ್ಚಿಸುವಲ್ಲಿ ಸಂಬಂಧಪಟ್ಟವರು ಕ್ರಮ ವಹಿಸಬೇಕು.

-ನರಸಿಂಹ ದೇವಾಡಿಗ, ಕಲ್ಲಂಗಡಿ ಬೆಳೆಗಾರರ, ನಾಗೂರು- ಕಿರಿಮಂಜೇಶ್ವರ.


bengaluru

LEAVE A REPLY

Please enter your comment!
Please enter your name here