ಬೆಂಗಳೂರು, ಫೆ.13: “ರಾಜ್ಯದಲ್ಲಿ ಕಾಂಗ್ರೆಸ್ ನ ಹೇಡಿ ಸರಕಾರದ ಫಲವಾಗಿ ಕರುನಾಡಿಗೆ ಕುಡಿಯುವ ನೀರಿನ ಹಾಹಾಕಾರ ಕಾಡುವುದು ಶತಸಿದ್ಧ” ಎಂದು ಬಿಜೆಪಿ ಟೀಕಿಸಿದೆ.
ಈ ಬಗ್ಗೆ ‘X’ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, “ಕಾವೇರಿ ನೀರು ನಿಯಂತ್ರಣ ಸಮಿತಿಯು ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಮತ್ತೆ 2.5 ಟಿಎಂಸಿ ನೀರು ಬಿಡಲು ಕರ್ನಾಟಕಕ್ಕೆ ಒತ್ತಾಯಿಸಿದೆ. ತಮಿಳುನಾಡಿನ ಪರ ಅಧಿಕಾರಿಗಳು ನೀರಿಗಾಗಿ ಒತ್ತಾಯಿಸಿದರೆ, ಸಿಎಂ ಸ್ಟ್ಯಾಲಿನ್ ಮೇಲಿನ ವ್ಯಾಮೋಹಕ್ಕೆ ಸಿದ್ದರಾಮಯ್ಯ ಅವರ ಸರ್ಕಾರ ಸವಾಲೊಡ್ಡದೆ ಸುಮ್ಮನೆ ಬಂದಿದೆ” ಎಂದು ಆರೋಪಿಸಿದೆ.
“ಈಗಾಗಲೇ ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ರಾಜಧಾನಿ ಬೆಂಗಳೂರಿನಲ್ಲೇ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಒಂದು ವೇಳೆ ಕದ್ದು ಮುಚ್ಚಿ ಮತ್ತೊಮ್ಮೆ ನೀರು ಬಿಡುಗಡೆ ಮಾಡಿದರೆ ಹನಿ ನೀರಿಗೂ ಜನರು ಪರದಾಡುವುದು ನಿಶ್ಚಿತ” ಎಂದು ಬಿಜೆಪಿ ಹೇಳಿದೆ.