ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಆಗಾಗ ಕ್ಯಾತೆ ತೆಗೆಯುವ ತಮಿಳುನಾಡು ಸರ್ಕಾರ ಮತ್ತೆ ತನ್ನ ಕ್ಯಾತೆಯನ್ನು ಮುಂದುವರೆಸಿದೆ. ಬೆಂಗಳೂರು/ನವದೆಹಲಿ; ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಆಗಾಗ ಕ್ಯಾತೆ ತೆಗೆಯುವ ತಮಿಳುನಾಡು ಸರ್ಕಾರ ಮತ್ತೆ ತನ್ನ ಕ್ಯಾತೆಯನ್ನು ಮುಂದುವರೆಸಿದೆ.
ತಮಿಳುನಾಡು ಹಾಗೂ ಕರ್ನಾಟಕ ನಡುವಿನ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ತಮಿಳುನಾಡು ರಾಜ್ಯದ ಅಧಿಕಾರಿಗಳು ಕ್ಯಾತೆ ತೆಗೆದಿದ್ದಾರೆ.
ತಮ್ಮ ಪಾಲಿನ ನೀರನ್ನು ಕರ್ನಾಟಕ ಬಾಕಿ ಉಳಿಸಿಕೊಂಡಿದೆ ಎಂದು ತಮಿಳುನಾಡು ರಾಜ್ಯದ ಪ್ರತಿನಿಧಿಗಳು ಹೇಳಿದ್ದು, ಈ ಹೇಳಿಗೆ ಉಭಯ ರಾಜ್ಯಗಳ ಪ್ರತಿನಿಧಿಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ತಮಿಳುನಾಡು ರಾಜ್ಯದ ಬೇಡಿಕೆಗೆ ಕರ್ನಾಟಕ ಒಪ್ಪದ ಕಾರಣ ತಮಿಳುನಾಡಿನ ಪ್ರತಿನಿಧಿಗಳು ಸಭೆಯಿಂದ ಹೊರ ನಡೆದ ಬೆಳವಣಿಗೆಗಳೂ ಕೂಡ ಕಂಡುಬಂದಿತ್ತು.
ಇದನ್ನೂ ಓದಿ: ಕೆಆರ್ ಎಸ್ , ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ಹರಿದ ಕಾವೇರಿ, ಕೆರಳಿದ ರೈತರು!
ಕರ್ನಾಟಕ ಸರ್ಕಾರದ ಒತ್ತಡದ ಮೇರೆಗೆ ಬಿಡುಗಡೆ ಮಾಡಬೇಕಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಪ್ರಾಧಿಕಾರ ಪರಿಗಣಿಸುತ್ತಿದೆ ಎಂದು ತಮಿಳುನಾಡು ಅಧಿಕಾರಿಗಳು ಆರೋಪಿಸಿದರು. ಆದರೆ, ಹೆಚ್ಚು ನೀರು ಬಿಡಲು ಸಾಧ್ಯವೇ ಇಲ್ಲ. 10,000 ಕ್ಯೂಸೆಕ್ ಬದಲಿಗೆ 8,000 ಕ್ಯೂಸೆಕ್ ನೀರು ಬಿಡುಗಡೆ ಮಾಡಬಹುದೆಂದು ಕರ್ನಾಟಕದ ಅಧಿಕಾರಿಗಳು ಹೇಳಿದರು.
ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಅದರಲ್ಲೂ ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆ ಕೊರೆತೆ ಇದೆ. ಈ ಕಾರಣದಿಂದಾಗಿ ರಾಜ್ಯದ ಜಲಾಶಯಗಳು ಭರ್ತಿಯಾಗಿಲ್ಲ. ಹೀಗಾಗಿ ಜಲಾಶಯಗಳಲ್ಲಿ ನೀರು ಇಲ್ಲದಿರುವಾಗ ತಮಿಳುನಾಡಿಗೆ ಎಲ್ಲಿಂದ ನೀರುಬಿಡುವುದು? ಎಂದು ಪ್ರಶ್ನಿಸಿದರು. ಈ ಬಾರಿ ಮಳೆ ಕೊರೆತೆಯ ವರ್ಷವೆಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರಾಧಿಕಾರ ಸಮ್ಮತಿಸಲು ಮುಂದಾದಾಗ, ಸಮಿತಿಯು ವೈಜ್ಞಾನಿಕವಾಗಿ ನಿಗದಿಪಡಿಸಿದ್ದನ್ನು ಪ್ರಾಧಿಕಾರವು ಕಡಿಮೆ ಮಾಡುತ್ತಿರುವುದನ್ನು ಖಂಡಿಸಿ ತಮಿಳುನಾಡಿನ ಅಧಿಕಾರಿಗಳು ಸಭೆಯಿಂದ ಹೊರನಡೆದರು.
ಸುಪ್ರೀಂಕೋರ್ಟ್ ಮೊರೆ ಹೋಗಲು ತಮಿಳುನಾಡು ಚಿಂತನೆ
ಈ ನಡುವೆ ತಡರಾತ್ರಿ ಹೇಳಿಕೆ ನೀಡಿರುವ ತಮಿಳುನಾಡು ರಾಜ್ಯ ಜಲಸಂಪನ್ಮೂಲ ಸಚಿವ ದುರೈಮುರುಗನ್ ಅವರು, ನಮ್ಮ ರಾಜ್ಯದ ಪಾಲಿನ ನೀರು ಪಡೆಯಲು ಸುಪ್ರೀಂಕೋರ್ಟ್ ಮೊರೆ ಹೋಗಲಾಗುತ್ತದೆ ಎಂದು ಹೇಳಿದ್ದಾರೆ.
ಕಾವೇರಿ ನೀರು ನಿಯಂತ್ರಣ ಸಮಿತಿಯು 15 ದಿನಗಳ ಕಾಲ 15,000 ಕ್ಯೂಸೆಕ್ ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆದರೆ, ಕರ್ನಾಟಕ ಸರ್ಕಾರವು ಪ್ರಾಧಿಕಾರದ ಸಭೆಯಲ್ಲಿ ತನ್ನ ನಿಲುವನ್ನು ಬದಲಾಯಿಸಿದೆ. ಆಗಸ್ಟ್ 22 ರವರೆಗೆ ತಮಿಳುನಾಡಿಗೆ ಕೇವಲ 8,000 ಕ್ಯೂಸೆಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ: 100 ಅಡಿ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ; ರೈತರ ಮೊಗದಲ್ಲಿ ಮಂದಹಾಸ
ಕರ್ನಾಟಕ ಜಲಾಶಯಗಳು ಒಟ್ಟು 114.5 ಟಿಎಂಸಿಎಫ್‌ಟಿ ಸಂಗ್ರಹ ಸಾಮರ್ಥ್ಯದ ಶೇ 82 ರಷ್ಟು ಸಂಗ್ರಹವನ್ನು ಹೊಂದಿವೆ. ಕರ್ನಾಟಕಕ್ಕೆ ನೀರಿನ ಕೊರತೆ ಇಲ್ಲ. ಆದರೆ, ತಮಿಳುನಾಡಿಗೆ ನೀರು ಬಿಡಲು ಅವರು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ಮೊರೆಹೋಗುವುದನ್ನು ಬಿಟ್ಟು ತಮಿಳುನಾಡಿಗೆ ಬೇರೆ ದಾರಿಯಿಲ್ಲ. ಶೀಘ್ರದಲ್ಲೇ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ ನೀರು ಪಡೆಯಲು ಸರ್ಕಾರ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ರಚಿಸಲಾಗಿರುವ ಸ್ವಾಯತ್ತ ಸಂಸ್ಥೆ ಸಿಡಬ್ಲ್ಯುಎಂಎ. ಹೀಗಾಗಿ ಸಮಸ್ಯೆ ಪರಿಹರಿಸುವ ಜವಾಬ್ದಾರಿ ಸಿಡಬ್ಲ್ಯುಎಂಎ ಮೇಲಿದೆ. ಆದರೆ, ಸಿಡಬ್ಲ್ಯುಎಂಎ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ ಎದು ತಿಳಿಸಿದ್ದಾರೆ.
ತಮಿಳುನಾಡು ರಾಜ್ಯದ ಜಲಸಂಪನ್ಮೂಲ ಕಾರ್ಯದರ್ಶಿ ಮಾತನಾಡಿ, ಆಗಸ್ಟ್ 9ರವರೆಗೆ ತಮಿಳುನಾಡಿಗೆ ಬಿಡುಗಡೆ ಮಾಡಬೇಕಿರುವ 37.9 ಟಿಎಂಸಿ ನೀರನ್ನು ಕೂಡಲೇ ಬಿಡುಗಡೆ ಮಾಡಬೇಕು, ಪ್ರತೀನಿತ್ಯ ಬಿಡುಗಡೆ ಮಾಡಬೇಕಿರುವ ನೀರನ್ನು ಆಗಲೇ ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚನೆ ನೀಡಬೇಕೆಂದು ಒತ್ತಾಯಿಸಿದೆವು. ಆದರೆ, ನಮ್ಮ ಮನವಿಗೆ ಕರ್ನಾಟಕ ಒಪ್ಪಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕುಡಿಯುವ ನೀರಿನ ಅಗತ್ಯತೆ ಗಮನದಲ್ಲಿಟ್ಟುಕೊಂಡು ತಮಿಳುನಾಡಿಗೆ ಕಾವೇರಿ ನೀರು: ಡಿಕೆ ಶಿವಕುಮಾರ್
ಪಿಎಂಕೆ ಅಧ್ಯಕ್ಷ ಅನ್ಬುಮಣಿ ರಾಮದಾಸ್ ಅವರು ಮಾತನಾಡಿ, ಕರ್ನಾಟಕದ ಜಲಾಶಗಳಲ್ಲಿ ಒಟ್ಟು 93.05 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಜಲಾಶಯಗಳ ಒಟ್ಟು ಸಾಮರ್ಥ್ಯದ ಶೇ.81ರಷ್ಟು ನೀರು ಇದಾಗಿದೆ. ಆದರೆ, ತಮಿಳನಾಡು ರಾಜ್ಯಕ್ಕೆ ಬಿಡಬೇಕಾದ ನೀರಿಗಿಂತಲೂ ಕರ್ನಾಟಕದಲ್ಲಿ ಶೇ.244ರಷ್ಟು ಹೆಚ್ಚು ನೀರಿದೆ. ಆದರೂ, ನೀರು ಬಿಡುಗಡೆ ಮಾಡಲು ನಿರಾಕರಿಸುತ್ತಿದ್ದಾರೆಂದು ಹೇಳಿದ್ದಾರೆ.
ತನ್ನ ಆದೇಶವನ್ನು ಕರ್ನಾಟಕ ಧಿಕ್ಕರಿಸಿದರೆ, ಅದರ ವಿರುದ್ಧ ಕ್ರಮ ಕೈಗೊಳ್ಳಲು ಸಿಡಬ್ಲ್ಯುಎಂಎಗೆ ಅಧಿಕಾರವಿಲ್ಲ. ಹೀಗಾಗಿ ಕಾವೇರಿಗೆ ಅಡ್ಡಲಾಗಿ ನಿರ್ಮಿಸಲಾದ ಅಣೆಕಟ್ಟುಗಳ ಮೇಲಿನ ನಿಯಂತ್ರಣವನ್ನು ಸಿಡಬ್ಲ್ಯೂಎಂಎಗೆ ನೀಡಬೇಕು, ಇದರಿಂದಾಗಿ ನದಿ ತೀರದ ರಾಜ್ಯಗಳಿಗೆ ನೀರು ಬಿಡಲು ಅದಕ್ಕೆ ಸಾಧ್ಯವಾಗುತ್ತದೆ. ಈ ಬಗ್ಗೆ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.